ಡಿವಿಜಿ ಸುದ್ದಿ, ಬೆಂಗಳೂರು: ವಿದ್ಯೆ ಯಾರ ಸ್ವತ್ತು ಅಲ್ಲ. ವಿದ್ಯೆಗೆ ಬಡವ, ಶ್ರೀಮಂತ ಎನ್ನುವ ಬೇಧವಿಲ್ಲ. ಹೌದು.., ದೂರದ ಯಾದಗಿರಿಯಿಂದ ಕೂಲಿ ಕಾರ್ಮಿಕನಾಗಿ ಸಿಲಿಕಾನ್ ಸಿಟಿ ಬೆಂಗಳೂರಿಗೆ ಬಂದ ಮಹೇಶ್ ಎನ್ನುವ ವಿದ್ಯಾರ್ಥಿ, ಕಡು ಬಡತನದಲ್ಲಿ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ 625ಕ್ಕೆ 616 ಅಂಕ ಗಳಿಸಿದ್ದಾನೆ.
ಮಹೇಶ್ ಸಾಧನೆ ಕಂಡ ಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ಇಂದು ಅವರ ಮನೆಗೆ ಭೇಟಿ ನೀಡಿದ್ದರು. ಇಂದಿರಾನಗರದ ಜೀವನಭೀಮಾನಗರದ ಸರ್ಕಾರಿ ಕರ್ನಾಟಕ ಪಬ್ಲಿಕ್ ಶಾಲೆಯ (KPS) ವಿದ್ಯಾರ್ಥಿ ಮಹೇಶ್, ಈ ಬಾರಿಯ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ 616 ಅಂಕಗಳನ್ನು ಗಳಿಸಿದ್ದಾನೆ.

ಮಹೇಶ ಯಾದಗಿರಿಯಿಂದ ಬೆಂಗಳೂರಿಗೆ ಗುಳೆ ಬಂದಿರುವ ಕುಟುಂಬಕ್ಕೆ ಸೇರಿದ ಬಾಲಕ. ಬಡತನದ ನಡುವೆಯೂ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಉತ್ತಮ ಸಾಧನೆ ತೋರಿದ್ದಾನೆ. ಕಟ್ಟಡ ನಿರ್ಮಾಣ ಕಾರ್ಯದಲ್ಲಿ ಕೂಲಿ ಕೆಲಸ ಮಾಡಿಕೊಂಡೇ ವಿದ್ಯಾಭ್ಯಾಸ ಮುಗಿಸಿದ್ದಾನೆ.
ಇಂದು ಅವನ ಪುಟ್ಟ ಗುಡಿಸಲಿಗೆ ಶಿಕ್ಷಣ ಸಚಿವರು ಹೋಗಿದ್ದರು. ಆ ಮನೆಯಲ್ಲಿ ಕುಳಿತುಕೊಳ್ಳಲೂ ಜಾಗವಿಲ್ಲದಿದ್ದರೂ, ಮಹೇಶನಿಗೆ ಶಿಕ್ಷಣ ಇಲಾಖೆಯ ಪರವಾಗಿ ಅಭಿನಂದನೆ ಸಲ್ಲಿಸಿ ಕಾಲೇಜು ಶಿಕ್ಷಣಕ್ಕೆ ವ್ಯವಸ್ಥೆ ಮಾಡುವುದಾಗಿ ಧೈರ್ಯ ತುಂಬಿ ಬಂದಿದ್ದೇನೆ ಎಂದು ಸಚಿವರು ಫೇಸ್ ಬರೆದುಕೊಂಡಿದ್ದಾರೆ.
ಮಹೇಶನಿಗೆ ಪಿಯುಸಿ ತರಗತಿಗಳಲ್ಲಿ ವಿಜ್ಞಾನ ವಿಷಯಗಳನ್ನು ತೆಗೆದುಕೊಂಡು ಓದಬೇಕೆಂಬ ಮಹದಾಸೆಯಿದೆ. ಅವನ ಮನೆ, ಅವನ ಕುಟುಂಬ, ಅವರ ತಾಯಿಯ ಮುಗ್ಧತೆ, ಮಹೇಶನ ಸಾಧನೆ ಎಲ್ಲ ಕಂಡಾಗ ಕಣ್ತುಂಬಿ ಬಂತು – ಅದೇ ರೀತಿ ಹೃದಯ ತುಂಬಿ ಬಂತು ಎಂದಿದ್ದಾರೆ.
https://www.facebook.com/nimmasuresh/posts/3717447771615874



