ಡಿವಿಜಿ ಸುದ್ದಿ, ದಾವಣಗೆರೆ: ದೇಶದಲ್ಲಿ ಈ ಹಿಂದೆ ಮಕ್ಕಳ ವೈದ್ಯಕೀಯ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಸೌಲಭ್ಯಗಳು ಕಡಿಮೆ ಇದ್ದವು. ಚಿಕಿತ್ಸೆ ಕುರಿತು ವಿದ್ಯಾಭ್ಯಾಸ ಮಾಡಬೇಕಾಗಿದ್ದರೆ ವಿದೇಶಕ್ಕೆ ಹೋಗಬೇಕಾಗಿತ್ತು. ಆದರೀಗ ಎಲ್ಲಾ ಸೌಲಭ್ಯಗಳು ಸ್ಥಳೀಯವಾಗಿಯೇ ಸಿಗುತ್ತಿದ್ದು, ಸಾಕಷ್ಟು ಸುಧಾರಣೆಯಾಗಿದೆ ಎಂದು ದಕ್ಷಿಣ ಭಾರತದ ಐಎಪಿ ಉಪಾಧ್ಯಕ್ಷ ಡಾ.ಶ್ರೀನಾಥ ಮುಗಳಿ ಹೇಳಿದರು.
ನಗರದ ಬಾಪೂಜಿ ಆಸ್ಪತ್ರೆಯಲ್ಲಿ ಜೆಜೆಎಂ ಮೆಡಿಕಲ್ ಕಾಲೇಜು, ಎಸ್‍ಎಸ್ ಮೆಡಿಕಲ್ ಕಾಲೇಜು, ದಾವಣಗೆರೆ ಮಕ್ಕಳ ಜಿಲ್ಲಾ ಘಟಕ ಸಹಯೋಗದೊಂದಿಗೆ ದಕ್ಷಿಣ ಭಾರತ ಹಾಗೂ ಕರ್ನಾಟಕ ಮಕ್ಕಳ ಸಂಸ್ಥೆಯ ವಾರ್ಷಿಕ ಸಮ್ಮೇಳನ ಉದ್ಘಾಟಿಸಿ ಮಾತನಾಡಿದ ಅವರು, ವೈದ್ಯಕೀಯ ಕ್ಷೇತ್ರದಲ್ಲಿ ಈಗ ಹಲವಾರು ಬದಲಾವಣೆ ಕಂಡಿದೆ. ಈ ಹಿಂದೆ ಮಕ್ಕಳ ಶಸ್ತ್ರಚಿಕಿತ್ಸೆ ವಿದೇಶಗಳಿಗೆ ಹೋಗಬೇಕಿತ್ತು. ಆದರೀಗ ಮಕ್ಕಳ ಶಸ್ತ್ರ ಚಿಕಿತ್ಸೆ ಸೇರಿದದಂತೆ ಎಲ್ಲಾ ಅತ್ಯಾಧುನಿಕ ತಂತ್ರಜ್ಞಾನಗಳೂ ಸ್ಥಳೀಯವಾಗಿ ಲಭ್ಯವಾಗುವಂತಾಗಿದೆ.
ವಿದ್ಯಾರ್ಥಿಗಳು ಸಂಪೂರ್ಣ ಮಾಹಿತಿ ಪಡೆದುಕೊಂಡರೆ ಮಕ್ಕಳಿಗೆ ಅತ್ಯುತ್ತಮ ಚಿಕಿತ್ಸೆ ನೀಡಬಹುದು. ವೈದ್ಯಕೀಯ ವಿದ್ಯಾರ್ಥಿಗಳು ಈ ಸೆಮಿನಾರ್ ಸದುಪಯೋಗ ಪಡೆದುಕೊಳ್ಳಬೇಕು ಎಂದು ಹೇಳಿದರು.
ಮಕ್ಕಳಲ್ಲಿ ಕಾಣಿಸಿಕೊಳ್ಳುವ ಡೆಂಗ್ಯೂ, ಹೃದಯ ಸಂಬಂಧಿ ಕಾಯಿಲೆ, ರಕ್ತಹೀನತೆ, ಹೆಚ್1ಎನ್1, ಮೂರ್ಛೆ ರೋಗ, ಮೂತ್ರ ಪಿಂಡಕಾಯಿಲೆಗಳು, ಶ್ವಾಸಕೋಶ ಸಂಬಂಧಿಸಿದಂತೆ ಕಾಯಿಲೆಗಳ ಬಗ್ಗೆ ಚಿಕಿತ್ಸಾ ವಿಧಾನಗಳನ್ನು ಚರ್ಚೆ ಹಾಗೂ ಉಪನ್ಯಾಸದ ಮೂಲಕ ತಿಳಿಸಲಾಯಿತು.
ಇದನ್ನು ಓದಿ: ಎಸ್‌ಎಸ್ ವೈದ್ಯಕೀಯ ಮಹಾವಿದ್ಯಾಲಯದಲ್ಲಿ ಕರ್ನಾಟಕ ಮಕ್ಕಳ ಸಂಸ್ಥೆ ವಾರ್ಷಿಕ ಸಮ್ಮೇಳನ
ಸಮ್ಮೇಳನದ ಅಧ್ಯಕ್ಷರಾದ ಡಾ.ಎನ್.ಕೆ.ಕಾಳಪ್ಪ ಅಧ್ಯಕ್ಷತೆ ವಹಿಸಿದ್ದರು. ಎಸ್‍ಎಸ್ ವೈದ್ಯಕೀಯ ಮಹಾವಿದ್ಯಾಲಯದ ಪ್ರಾಚಾರ್ಯ ಡಾ.ಬಿ.ಎಸ್.ಪ್ರಸಾದ್, ರಾಷ್ಟ್ರೀಯ ಐಎಪಿ ಅಧ್ಯಕ್ಷ ಡಾ.ದಿಗಂತ್ ಶಾಸ್ತ್ರಿ, ಡಾ.ಸಂತೋಷ್ ಸೂನ್ಸ್, ಡಾ.ಶಾಂತರಾಜ್, ಡಾ.ಎಸ್.ಬಿ.ಮುರುಗೇಶ್, ಡಾ.ಮಧು ಎಸ್ ಪೂಜಾರಿ, ಡಾ.ಬಸವಂತಕುಮಾರ್, ಡಾ.ವರುಣ್ ಕುಸಗೂರು ಸೇರಿದಂತೆ ಮತ್ತಿತರರಿದ್ದರು.



