ಸುತ್ತುವ ಭೂಮಿಯಲ್ಲಿ
ತಿರುಗುತ್ತಿರುವ ಮಂದಿ ನಾವು
ಈ ಪರಿಯ ನಗುವೇ?
ಕಾಲಚಕ್ರವಿದು ತಿರುಗಲೆಬೇಕು
ಮೇಲಿದ್ದವರು ಕೆಳಗೆ,ಕೆಳಗಿದ್ದವರು ಮೇಲೆ
ಕಾಲನ ತಕ್ಕಡಿಯಿದು ತರತಮ ರಹಿತ
ಎಣಿಕೆಗೂ ನಿಲುಕದ ವೇಗ
ಅಳತೆಗೂ ಮೀರಿದ ಅನಂತ
ಕಾಲನೆದೆಯಲ್ಲಿ ಕರಗಿದವರು ಸಹಸ್ರ,ಸಹಸ್ರ!
ಕೋಟೆ ಕೊತ್ತಲು,ರಾಜ್ಯ ಸಾಮ್ರಾಜ್ಯ
ರಾಜದಂಡ ಕಿರೀಟಗಳು ತರಗೆಲೆಗಳಂತೆ
ಹಾರಿದವು ಕಾಲವೆಂಬ ಬಿರುಗಾಳಿಗೆ
ನಿಂತ ನೆಲವೆ ಸ್ಥಿರವಲ್ಲ;
ಇಂದಲ್ಲ ನಾಳೆ ಓಗೊಡಲೇಬೇಕಲ್ಲ
ಕಾಲನ ಕರೆಗೆ
ಸೃಷ್ಟಿಸಲಿ ಒಳಿತೆಂಬ ಚರಿತೆ
ಜೀವ ಕಂಪಿಸಿ, ಉಸಿರು ನಿಂತು
ಅಂತಕನು ಕೈಹಿಡಿವ ಮುನ್ನ..!
-ಶಿಲ್ಪ.ಜಿ.ಸಿ
ಶಿಕ್ಷಕರು,ದಾವಣಗೆರೆ



