ಡಿವಿಜಿ ಸುದ್ದಿ, ದಾವಣಗೆರೆ: ಸಿನಿಮಾ ಸಿರಿ ಸಂಸ್ಥೆ ವತಿಯಿಂದ ಡಿ. 14 ರಂದು ಶನಿವಾರ ಸಂಜೆ 6 ಗಂಟೆಗೆ ನಗರದ ಜಯದೇವ ವೃತ್ತದ ಶಿವಯೋಗಿ ಮಂದಿರದಲ್ಲಿ ಎಲ್ಲೆಲ್ಲೂ…. ಸಂಗೀತವೇ ಕಾರ್ಯಕ್ರಮ ಆಯೋಜಿಸಿದೆ.
ಈ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಸ್ಥೆ ಪ್ರಧಾನ ಕಾರ್ಯದರ್ಶಿ ಎಂ.ಜಿ. ಜಗದೀಶ್, ಖ್ಯಾತ ಬಹುಭಾಷಾ ಹಿನ್ನಲೆ ಗಾಯಕ ಕರ್ನಾಟಕದ ಜೇಸುದಾಸ್ ಖ್ಯಾತಿಯ ರಮೇಶಚಂದ್ರ ಅವರು ಸಂಗೀತ ಸಂಜೆ ನಡೆಸಿಕೊಳ್ಳಲಿದ್ದಾರೆ. ಹಳೇಯ ಕನ್ನಡ, ಹಿಂದಿ ಹಳೆಯ ಚಲನಚಿತ್ರ ಗೀತೆಗಳ ಜೊತೆ ಹೊಸ ಚಲನಚಿತ್ರ ಗೀತೆಗೆಳನ್ನು ಹಾಡಲಿದ್ಧಾರೆ ಎಂದರು.

ಸ್ಥಳೀಯ ಕಲಾವಿದರಿಗೂ ಅವಕಾಶ ಕಲ್ಪಿಸುವ ದೆಸೆಯಲ್ಲಿ ವಿದುಷಿ ಸಂಗೀತ ರಾಘವೇಂದ್ರ, ರಕ್ಷಾ ಕೆ.ಆರ್, ಅಮೀತ್‌ಶೇಖರ್, ಬಿ.ಪೂಜಾ ಮುಂತಾದವರು ತಮ್ಮ ಪ್ರತಿಭೆ ಅನಾವರಣಗೊಳಿಸಲಿದ್ದಾರೆ ಎಂದು ಸಂಸ್ಥೆಯ ಕಾರ್ಯದರ್ಶಿ ಸಾಲಿಗ್ರಾಮ ಗಣೇಶ್ ಶೆಣೈ ತಿಳಿಸಿದರು.
ಕಾರ್ಯಕ್ರಮ ಉದ್ಘಾಟನೆಯನ್ನು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಡಾ.ಹೆಚ್.ಎಸ್.ಮಂಜುನಾಥ್ ಕುರ್ಕಿ ನೆರವೇರಿಸಲಿದ್ದಾರೆ. ಸಂಸ್ಥೆಯ ಅಧ್ಯಕ್ಷ ಟಿ.ಎಂ. ಪಂಚಾಕ್ಷರಯ್ಯ ಅಧ್ಯಕ್ಷತೆ ವಹಿಸಿಕೊಳ್ಳಲಿದ್ದಾರೆ ಎಂದು ನಿಕಟಪೂರ್ವ ಅಧ್ಯಕ್ಷೆ ಡಾ. ವಿಜಯಲಕ್ಷ್ಮಿ ವೀರಮಾಚಿನೇನಿ ತಿಳಿಸಿದ್ದಾರೆ.
ಸಾರ್ವಜನಿಕರಿಗೆ ಉಚಿತ ಪ್ರವೇಶಾವಕಾಶವಿರುವ ಈ ಅಪರೂಪದ ರಸಮಂಜರಿ ಕಾರ್ಯಕ್ರಮಕ್ಕೆ ಸಂಗೀತಾಸಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಹಳೆಯ ಚಲನಚಿತ್ರ ಗೀತೆಗಳನ್ನು ಕೇಳಿ ಮೆಲುಕು ಹಾಕಿ, ಆಸ್ವಾದಿಸಿ, ಪ್ರೋತ್ಸಾಹಿಸಲು ಸಂಸ್ಥೆಯ ಪರವಾಗಿ ಖಜಾಂಚಿ ಹೆಚ್.ಎನ್.ರಂಗನಾಥ್ ವಿನಂತಿಸಿದರು. ನಿರ್ದೇಶಕ ಸುರಭಿ ಶಿವಮೂರ್ತಿ ಉಪಸ್ಥಿತರಿದ್ದರು.



