ಡಿವಿಜಿ ಸುದ್ದಿ, ಬೆಂಗಳೂರು: ಸದ್ಯಕ್ಕೆ ಯಾವುದೇ ಶಾಲೆ ಆರಂಭಿಸುವುದಿಲ್ಲ. ಪೋಷಕರು ಯಾರೂ ಆತಂಕ ಪಡುವ ಅಗತ್ಯವಿಲ್ಲ ಎಂದು ಶಿಕ್ಷಣ ಸಚಿವ ಸುರೇಶ್ ಕುಮಾರ್ ಹೇಳಿದ್ದಾರೆ.
https://www.facebook.com/nimmasuresh/videos/3521999407827379/
ಫೇಸ್‍ಬುಕ್‍ನಲ್ಲಿ ಮಾತನಾಡಿದ ಅವರು, ಕೇಂದ್ರ ಸರ್ಕಾರ ಮೇ 30 ರಂದು ಶಾಲೆಗಳನ್ನು ಆರಂಭಿಸುವ ಬಗ್ಗೆ ಪೋಷಕರ ಅಭಿಪ್ರಾಯವನ್ನು ಕೇಳಿ ಎಂದು ರಾಜ್ಯ ಸರ್ಕಾರಗಳಿಗೆ ನಿರ್ದೇಶನ ನೀಡಿತ್ತು. ಈ ನಿಟ್ಟಿನಲ್ಲಿ ನಾವು ರಾಜ್ಯದಲ್ಲಿರುವ ಶಾಲೆಗಳಿಗೆ ಸುತ್ತೋಲೆ ಕಳುಹಿಸಿ ಪೋಷಕರ ಅಭಿಪ್ರಾಯ ಸಂಗ್ರಹಕ್ಕೆ ಮುಂದಾಗಿದ್ದೇವೆ.
ಈ ತಿಂಗಳು ಜೂನ್ 10, 11, 12 ರಂದು ಎಲ್ಲ ಶಾಲೆಗಳಲ್ಲಿ ಪೋಷಕರ ಸಭೆ ನಡೆಯಲಿದೆ. ಪೋಷಕರ ಅಭಿಪ್ರಾಯಗಳು ಕ್ರೋಢಿಕರಿಸಿ ಜೂನ್ 15ಕ್ಕೆ ಸರ್ಕಾರವನ್ನು ತಲುಪಬಹುದು. ನಂತರ ಶಾಲೆ ಆರಂಭಿಸಬೇಕೋ? ಬೇಡವೋ ಎಂಬುದನ್ನು ನಿರ್ಧಾರ ಕೈಗೊಳ್ಳಲಾಗುವುದು. ಜುಲೈ ಒಂದರಿಂದ ಶಾಲೆಯನ್ನು ತೆರೆಯುವುದಿಲ್ಲ. ಸರ್ಕಾರ ಅಭಿಪ್ರಾಯ ಸಂಗ್ರಹ ನಡೆಯಲಿದೆ ಎಂದು ಸ್ಪಷ್ಟ ಪಡಿಸಿದರು.
ಕೊರೊನಾ ದೀರ್ಘ ಕಾಲ ಇದ್ದರೆ ಅಲ್ಲಿಯವರೆಗೆ ಶಾಲೆಯನ್ನು ಮುಂದೂಡಬೇಕೇ..? ಅಥವಾ ಕೊರೊನಾದ ಜೊತೆಗೆ ನಾವು ಬದುಕಬೇಕೇ ಎಂಬ ಪ್ರಶ್ನೆ ಎದ್ದಿದೆ. ಈಗಾಗಲೇ ಚಿಕನ್ ಗುನ್ಯಾ ರೀತಿಯ ಕಾಯಿಲೆ ಜೊತೆ ಬದುಕುತ್ತಿದ್ದೇವೆ. ಇದೇ ರೀತಿಯಾಗಿ ಕೊರೊನಾ ಜೊತೆ ಬದುಕಲು ಸಾಧ್ಯವಿಲ್ಲವೇ ಎಂಬ ಪ್ರಶ್ನೆಯೂ ಇದೆ..?. ಇದರ ಜೊತೆಯಲ್ಲಿ ಶಾಲೆಯಲ್ಲಿ ಸಾಮಾಜಿಕ ಅಂತರವನ್ನು ಕಾಪಾಡುವುದು ಹೇಗೆ ಎನ್ನುವುದರ ಬಗ್ಗೆಯೂ ಚರ್ಚಿಸಬೇಕಿದೆ ಎಂದರು.
ನಾವು ಯಾವ ಲಾಬಿಗೂ ಮಣಿದಿಲ್ಲ. ತರಾತುರಿಯಲ್ಲಿ ನಾವು ಶಾಲೆಯನ್ನು ತೆರೆಯುವುದಿಲ್ಲ. ಮಕ್ಕಳ ಸುರಕ್ಷತೆ ಜೊತೆಗೆ ಮಕ್ಕಳ ಕಲಿಕೆ, ಭವಿಷ್ಯವನ್ನು ಗಮನಿಸಿ ನಿರ್ಧಾರ ಕೈಗೊಳ್ಳುತ್ತೇವೆ. ಸದ್ಯಕ್ಕೆ ಪೂರ್ವ ಪ್ರಾಥಮಿಕ, ಪ್ರಾಥಮಿಕ ಶಾಲೆ ಪ್ರಾರಂಭ ಬೇಡ ಎಂಬ ಅಭಿಪ್ರಾಯ ಬಂದಿದೆ. ಪೋಷಕರ ಅಭಿಪ್ರಾಯ ಪಡೆದ ಬಳಿಕ ನಾವು ಶಾಲೆ ಆರಂಭಿಸುವ ಬಗ್ಗೆ ಅಂತಿಮ ನಿರ್ಧಾರ ಕೈಗೊಳ್ಳುತ್ತೇವೆ ಎಂದಿದ್ದಾರೆ.



