ಡಿವಿಜಿ ಸುದ್ದಿ, ಬಾಗಲಕೋಟೆ: ಸ್ವಾತಂತ್ರ್ಯ ಹೋರಾಟಗಾರ ದೊರೆಸ್ವಾಮಿ ಅವರಿಗೆ ಸ್ವಾತಂತ್ರ್ಯ ಚಳವಳಿ ಪುರಾವೆ ಕೇಳುವ ದರಿದ್ರ ಆರ್ ಎಸ್ ಎಸ್ ಗೆ ಸ್ವಾಂತಂತ್ರ್ಯ ಹೋರಾಟದ ಯಾವ ಹಿನ್ನೆಲೆ ಇದೆ ಎಂದು ಸಾಮಾಜಿಕ ಹೋರಾಟಗಾರ ಎಸ್.ಆರ್. ಹಿರೇಮಠ ಕಿಡಿಕಾರಿದರು.
ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬ್ರಿಟಿಷರಿಗೆ ವೀರ ಸಾವರ್ಕರ್ ಕ್ಷಮಾಪಣಾ ಪತ್ರ ಬರೆದುಕೊಟ್ಟದ್ದು ಬಿಟ್ಟರೆ, ಈ ದರಿದ್ರ ಆರ್‌ಎಸ್‌ಎಸ್, ಸಂಘಪರಿವಾರದವರಿಗೆ ಸ್ವಾತಂತ್ರ್ಯ ಹೋರಾಟದ ಯಾವ ಹಿನ್ನೆಲೆಯೂ ಇಲ್ಲ. ಇಂಥವರು ದೊರೆಸ್ವಾಮಿ ಅವರನ್ನು ಸ್ವಾತಂತ್ರ್ಯ ಚಳವಳಿ ಪುರಾವೆ ಕೇಳಲು, ಇವರಿಗೆ ಏನು ಹಕ್ಕು ಇದೆ ಪ್ರಶ್ನಿಸಿದರು.
ಬಸನಗೌಡ ಯತ್ನಾಳ ಅಂತಹವರ ಉದ್ಧಟತನದ ಹೇಳಿಕೆ ಜನಪ್ರತಿನಿಧಿಗೆ ಶೋಭೆ ತರುವುದಿಲ್ಲ. ಈ ರೀತಿ ಅತಿ ಬೇಜವಾಬ್ದಾರಿಯಾಗಿ ನಾಲಿಗೆ ಹರಿಬಿಟ್ಟಿರುವುದು ನಾಚಿಕೆಗೇಡಿನ ಸಂಗತಿ. ಇಂತಹವರು ಬಹುಬೇಗ ಜನರ ವಿಶ್ವಾಸ ಕಳೆದುಕೊಳ್ಳಲಿದ್ದಾರೆ ಎಂದು ಭವಿಷ್ಯ ನುಡಿದರು
80ರ ದಶಕದ ಸಿಖ್ ಗಲಭೆಯ ನಂತರ ದೆಹಲಿಯಲ್ಲಿ ಅತಿ ದೊಡ್ಡ ಗಲಭೆ ನಡೆದಿದೆ. ಈ ವೇಳೆ ಪೊಲೀಸರು ಮೂಕ ಪ್ರೇಕ್ಷಕರಾಗಿದ್ದರು. ಕೇಂದ್ರ ಗೃಹ ಸಚಿವ ಅಮಿತ್ ಶಾಗೆ ಮಾನ–ಮರ್ಯಾದೆ ಇದ್ದರೆ ತಕ್ಷಣ ರಾಜೀನಾಮೆ ಕೊಡಬೇಕು. ಇಲ್ಲವೇ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರೇ ಕಿತ್ತು ಹಾಕಲಿ ಎಂದು ಆಗ್ರಹಿಸಿದರು.



