ಮುಂಬೈ: ಕ್ಯಾನ್ಸರ್ ಮತ್ತು ಉಸಿರಾಟ ತೊಂದರೆಯಿಂದ ಬಳಲುತ್ತಿದ್ದ ಬಾಲಿವುಡ್ ಹಿರಿಯ ನಟ ರಿಷಿ ಕಪೂರ್ (67) ಅವರು ಇಂದು ಬೆಳಗ್ಗೆ ನಿಧನರಾಗಿದ್ದಾರೆ.
ಕ್ಯಾನ್ಸರ್‌ನಿಂದ ಬಳಲುತ್ತಿದ್ದ ಕಪೂರ್, ಅಮೆರಿಕದಲ್ಲಿ ಒಂದು ವರ್ಷ ಚಿಕಿತ್ಸೆ ಪಡೆದು 2019ರ ಸೆಪ್ಟೆಂಬರ್‌ನಲ್ಲಿ ಭಾರತಕ್ಕೆ ವಾಪಸ್ ಆಗಿದ್ದರು. ಮಂಬೈನ ಸರ್ ಎಚ್.ಎನ್. ರಿಲಯನ್ಸ್ ಫೌಂಡೇಶನ್ ಆಸ್ಪತ್ರೆಗೆ ಬುಧವಾರ ರಾತ್ರಿ ದಾಖಲಾಗಿದ್ದರು.
ಖ್ಯಾತ ನಟ ರಾಜ್ ಕಪೂರ್ ಹಾಗೂ ಕೃಷ್ಣ ರಾಜ್ ಕಪೂರ್ ಮಗನಾದ ರಿಷಿ ಕಪೂರ್ ಮೇರಾ ನಾಮ್ ಜೋಕರ್ ಮೂಲಕ ಚಿತ್ರರಂಗಕ್ಕೆ 1970 ರಲ್ಲಿ ಪದಾರ್ಪಣೆ ಮಾಡಿದ್ದರು. ಈ ಸಿನಿಮಾದಲ್ಲಿ ಬಾಲನಟನಾಗಿ ನಟಿಸಿ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಲಭಿಸಿತ್ತು.

ರಿಷಿ ಕಪೂರ್ ಅವರು ಪೂರ್ಣ ಪ್ರಮಾಣದ ನಾಯಕನಾಗಿ ನಟಿಸಿದ ಮೊದಲ ಸಿನಿಮಾ ಬಾಬಿ (1973). ಈ ಚಿತ್ರದಲ್ಲಿ ಡಿಂಪಲ್ ಕಪಾಡಿಯಾ ರಿಷಿಗೆ ನಾಯಕಿಯಾಗಿದ್ದರು. ಈ ಚಿತ್ರದಲ್ಲಿನ ನಟನೆಗಾಗಿ 1974ರಲ್ಲಿ ಫಿಲ್ಮ್ ಫೇರ್ ಪ್ರಶಸ್ತಿ ಪಡೆದಿದ್ದರು. ಅದಾದ ಬಳಿಕ ರಿಷಿ ನಟಿಸಿದ್ದ ಹಲವು ಸಿನಿಮಾಗಳು ಅವರ ಖ್ಯಾತಿಯನ್ನು ಹೆಚ್ಚಿಸುವುವಂತೆ ಮಾಡಿದ್ದವು.
ಕಪೂರ್ ಸಾವಿಗೆ ಬಾಲಿವುಡ್ ದಿಗ್ಗಜ ಅಮಿತಾಬ್ ಬಚನ್ ಟ್ವಿಟರ್‌ನಲ್ಲಿ ಕಂಬನಿ ಮಿಡಿದಿದ್ದಾರೆ. ‘ಅವರು ಹೊರಟರು. ನಾನು ಕಳೆದುಕೊಂಡೆ’ ಎಂದು ಭಾವುಕವಾಗಿ ಟ್ವೀಟ್ ಮಾಡಿದ್ದಾರೆ.
ಪತ್ನಿ ನೀತು ಮತ್ತು ಪುತ್ರಿ ರಿದ್ಧಿಮಾ ಕಪೂರ್ ಸಾಹ್ನಿ, ಪುತ್ರ ರಣಬೀರ್ ಕಪೂರ್ ಅವರನ್ನು ರಿಷಿ ಕಪೂರ್ ಅಗಲಿದ್ದಾರೆ.



