ಡಿವಿಜಿ ಸುದ್ದಿ ದಾವಣಗೆರೆ: ನಿನ್ನೆ ಸುರಿದ ಭಾರೀ ಮಳೆಗೆ ದಾವಣಗೆರೆ ಜಿಲ್ಲೆಯ ಜನ-ಜೀವನ ಅಸ್ತವ್ಯಸ್ತಗೊಂಡಿದ್ದು, ತಗ್ಗು ಪ್ರದೇಶದ ಮನೆಗಳಿಗೆ ನೀರು ನುಗ್ಗಿದೆ. ಇನ್ನು ರೈತರು ಕಷ್ಟಪಟ್ಟು ಬೆಳೆದ ಭತ್ತದ ಬೆಳೆಗಳಿಗೆ ನೀರು ನುಗ್ಗಿದ್ದರಿಂದ ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗಿದೆ. ನಿನ್ನೆ ಇಡೀ ರಾತ್ರಿ ಸುರಿದ ಭಾರೀ ಮಳೆ ಸುರಿದಿದ್ದರಿಂದ ಜಿಲ್ಲಾದ್ಯಂತ ಅಪಾರ ಪ್ರಮಾಣದ ನಷ್ಟ ಉಂಟಾಗಿದೆ.
ಮಳೆಯ ತೀವತೆ ಹೆಚ್ಚಾಗುತ್ತಿದ್ದಂತೆ ನಿನ್ನೆ ರಾತ್ರಿ ಜಿಲ್ಲಾಧಿಕಾರಿಗಳೇ ಮುಂದೆ ನಿಂತು ಎಲ್ಲೇಲ್ಲಿ ಸಮಸ್ಯೆಯಾಗಿದೆಯೂ ಅಲ್ಲಿಗೆ ಭೇಟಿ ನೀಡಿ ಪರಿಹರಿಸುವ ಪ್ರಯತ್ನ ಮಾಡಿದರು. ಇಂದು ಬೆಳಗ್ಗೆ ಕೂಡ ಸಮಾಜಿಕ ಕಾರ್ಯಕರ್ತರ ಜೊತೆಗೂಡಿ ಮಳೆಯ ಹಾನಿಯ ಪ್ರೇಶಗಳಿಗೆ ಭೇಟಿ ನೀಡಿ ತಾತ್ಕಾಲಿಕ ಪರಿಹಾರ ನೀಡುವ ಪ್ರಯತ್ನ ಮಾಡಿದರು. ಅಗತ್ಯವಿದ್ದ ಕಡೆ ಆಹಾರ ಪೂರೈಸುವಂತೆ ಸೂಚನೆ ನೀಡಿದರು.
ದಾವಣಗೆರೆ ನಗರದ ಶಂಕರವಿಹಾರ, ಎಸ್.ಎ.ರವೀಂದ್ರನಾಥ ಬಡಾವಣೆ, ಎಸ್.ಎಂ.ಕೃಷ್ಣನಗರ, ಅಜಾದ್ ನಗರ, ಬಾಷಾನಗರ, ಮಂಡಕ್ಕಿಭಟ್ಟಿ, ಯಲ್ಲಮ್ಮನಗರ ಸುತ್ತಮುತ್ತ ಸೇರಿದಂತೆ ವಿವಿಧೆಡೆ ಮನೆಗಳಿಗೆ ನೀರು ನುಗ್ಗಿದ್ದು, ಅಗ್ನಿಶಾಮಕ ಸಿಬ್ಬಂದಿಗಳ ಸಹಾಯದಿಂದ ಸಾರ್ವಜನಿಕರು ನೀರನ್ನು ಹೊರಹಾಕುತ್ತಿದ್ದಾರೆ, ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿಯವರು ಇಂದು ಬೆಳಗ್ಗೆ ಮಳೆಯಿಂದ ಹಾನಿಗೊಳಗಾದ ಪ್ರದೇಶಗಳಿಗೆ ಭೇಟಿ ನೀಡಿದ್ದಾರೆ. ನೂರಾರು ಮನೆಗಳು, ವಾಹನಗಳು, ಜಲಾವೃತ್ತಗೊಂಡಿದ್ದನ್ನು ವೀಕ್ಷಿಸಿ ಜನರ ಸಮಸ್ಯೆಯನ್ನು ಜಿಲ್ಲಾಧಿಕಾರಿಗಳು ಆಲಿಸಿದ್ರು. ದಾವಣಗೆರೆ ಜಿಲ್ಲೆಯ ತ್ಯಾವಣಿಗೆ ಬಳಿ ಹಿರೇ ಹಳ್ಳ ಉಕ್ಕಿದ್ದರಿಂದ 1 ಸಾವಿರಕ್ಕೂ ಹೆಚ್ಚು ಎಕೆರೆ ಪ್ರದೇಶ ಸಂಪೂರ್ಣವಾಗಿ ಜಲಾವೃತವಾಗಿದೆ. ದಾವಣಗೆರೆಯ ಮುದಹದಡಿಯಲ್ಲಿ ಮನೆ ಕುಸಿತದ ಪರಿಣಾಮ ಎರಡು ಜಾನುವಾರಗಳು ಸಾವನ್ನಪ್ಪಿವೆ.
ಚನ್ನಗಿರಿ, ಹೊನ್ನಾಳಿ ವರದಿ: ಹೊನ್ನಾಳಿ ಹಾಗೂ ಚನ್ನಗಿರಿ ತಾಲ್ಲೂಕಿನ ದೊಡ್ಡಘಟ್ಟ, ಚಿರಡೋಣಿ ಗ್ರಾಮದ ಸುತ್ತಮುತ್ತ ಹಲವಾರು ಗ್ರಾಮಗಳ ಜಮೀನಿನಲ್ಲಿರುವ ಅಡಕೆ, ಮೆಕ್ಕೆಜೋಳ,ಭತ್ತದ ಬೆಳೆ ಸಂಪೂರ್ಣ ಮುಳುಗಡೆಯಾಗಿದೆ. ಏಷ್ಯಾದಲ್ಲಿಯೇ ದೊಡ್ಡ ಕೆರೆಯಾಗಿರುವ ಸೂಳೆಕೆರೆ ಉಕ್ಕಿ ಹರಿಯುತ್ತಿದೆ. ಸೇತುವೆ ಮೇಲೆ ರಭಸವಾಗಿ ನೀರು ಹರಿಯುತ್ತಿದ್ದು ನೀರಿನಲ್ಲಿಯೇ ವಾಹನ ಸವಾರರು ಸಂಚಾರ ಮಾಡುತ್ತಿದ್ದಾರೆ. ಮಳೆಯಿಂದ ಹಾನಿಯಾಗಿರುವ ಪ್ರದೇಶಗಳಿಗೆ ಜನಪ್ರತಿನಿಧಿಗಳು ಇಲ್ಲಿಯವರೆಗೂ ಭೇಟಿ ನೀಡಿ ಜನರ ಸಮಸ್ಯೆಗಳನ್ನು ಆಲಿಸಿಲ್ಲವೆಂದು ಸಾರ್ವಜನಿಕರು ಸಿಟ್ಟಿಗೆದ್ದ ಘಟನೆಯೂ ಜರುಗಿದೆ. ಇನ್ನು ಚನ್ನಗಿರಿ ಪಟ್ಟಣದಲ್ಲಿ 10 ಕ್ಕೂ ಹೆಚ್ಚು ಮನೆಗಳು ನೆಲಕ್ಕೆ ಉರುಳಿವೆ.
ಹರಿಹರ ವರದಿ : ನಗರದ ಭಾರತ್ ಆಯಿಲ್ ಮಿಲ್ ಕಾಂಪೌಂಡ್ ನಲ್ಲಿ ಇರುವ ಪೌರಕಾರ್ಮಿಕರ ಬಡಾವಣೆಯಲ್ಲಿ ಮನೆಗಳಿಗೆ ನೀರು ನುಗ್ಗಿದೆ. ನಿನ್ನೆ ರಾತ್ರಿ ಸುಮಾರು ಗಂಟೆಗಳ ಕಾಲ ಸುರಿದ ಧಾರಾಕಾರ ಮಳೆಗೆ ಇಲ್ಲಿನ ಮನೆಗಳಿಗೆ ನುಗ್ಗಿದ್ದು ಮನೆಯಲ್ಲಿದ್ದ ಗೃಹೋಪಯೋಗಿ ವಸ್ತುಗಳು ನೀರಿನಲ್ಲಿ ಕೊಚ್ಚಿ ಹೋಗಿ ನಿವಾಸಿಗಳ ಪರಿಸ್ಥಿತಿ ಅಧೋಗತಿ ಆಗಿದ್ದರೂ ನಗರಸಭಾ ಅಧಿಕಾರಿಗಳು ಮಾತ್ರ ಇತ್ತ ಕಡೆ ಬಂದಿಲ್ಲ ಎಂದು ನಿವಾಸಿಗಳು ಇಲಾಖೆಯ ಅಧಿಕಾರಿಗಳಿಗೆ ಹಿಡಿಶಾಪ ಹಾಕಿದರು.
ಪೌರಕಾರ್ಮಿಕರ ಬಡಾವಣೆಯಲ್ಲಿ ಸುಮಾರು ಮನೆಗಳು ಕುಸಿಯುವ ಹಂತದಲ್ಲಿ ಇರುತ್ತವೆ ಕೂಡಲೇ ಅಧಿಕಾರಿಗಳು ಎಚ್ಚೆತ್ತುಕೊಂಡು ಮಳೆ ನೀರು ಮನೆಗಳಿಗೆ ನುಗ್ಗದಂತೆ ಬೇರೆ ಪರ್ಯಾಯ ವ್ಯವಸ್ಥೆಯನ್ನು ಮಾಡಬೇಕು ಮುಂದಾದರೂ ಅಧಿಕಾರಿಗಳು ಗಮನ ಹರಿಸಿ ಬಡಾವಣೆಗಳ ಮುಂಜಾಗ್ರತೆ ಕ್ರಮ ಕೈಗೊಳ್ಳಬೇಕೆಂದು ಸ್ಥಳೀಯರು ಒತ್ತಾಯಿಸಿದರು.