ಡಿವಿಜಿ ಸುದ್ದಿ.ಕಾಂ, ದಾವಣಗೆರೆ: ಆಂಧ್ರ, ತಮಿಳುನಾಡು ಮಾದರಿಯಂತೆ ರಾಜ್ಯದಲ್ಲಿಯೂ ಪ್ರೌಢ ಶಾಲೆಯನ್ನು ದ್ವಿತೀಯ ಪಿಯುಸಿ ವರೆಗೆ ವಿಸ್ತರಿಸಬೇಕೆಂದು ಜಿಲ್ಲಾ ಶಾಶ್ವತ ಅನುದಾನರಹಿತ ಶಾಲಾ ಆಡಳಿತ ಮಂಡಳಿಗಳ ಸಂಘದ ಅಧ್ಯಕ್ಷ ತ್ಯಾವಣಿಗೆ ವೀರಭದ್ರಸ್ವಾಮಿ ಒತ್ತಾಯಿಸಿದರು.
ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಕೇಂದ್ರ ಶಿಕ್ಷಣ ನೀತಿ ಅನ್ವಯ 1 ರಿಂದ 5ನೇ ತರಗತಿ ವರೆಗೆ ಪ್ರಾಥಮಿಕ, 6 ರಿಂದ 8 ನೇತರಗತಿ ಹಿರಿಯ ಪ್ರಾಥಮಿಕ ಹಾಗು 9 ರಿಂದ 12 ನೇ ತರಗತಿ ವರೆಗೆ ಪ್ರೌಢ ಶಿಕ್ಷಣವಿದೆ. ತಮಿಳುನಾಡು ಮತ್ತು ಆಂಧ್ರ ಸೇರಿದಂತೆ ವಿವಿಧ ರಾಜ್ಯಗಳಲ್ಲಿ ಇದೇ ನೀತಿಯನ್ನು ಅನುಸರಿಸಲಾಗುತ್ತಿದೆ. ಆದರೆ, ಕರ್ನಾಟಕದಲ್ಲಿ ಈ ವ್ಯವಸ್ಥೆ ಜಾರಿಗೊಳಿಸಲು ಮೀನಾಮೇಷ ಮಾಡಲಾಗುತ್ತಿದೆ.
ರಾಜ್ಯದಲ್ಲಿ ನೂತನವಾಗಿ ಪ್ರೌಢಶಾಲೆ ಪ್ರಾರಂಭಿಸಲು ಅರ್ಜಿ ಸಲ್ಲಿಸಿದರೆ ಕೇವಲ 9 ಮತ್ತು 10 ನೇ ತರಗತಿ ಮಾತ್ರ ನಮೂದಿಸಿ ಅನುಮತಿ ನೀಡಲಾಗುತ್ತಿದೆ. ಶಿಕ್ಷಣ ಸಚಿವರು ಈ ಬಗ್ಗೆ ಕೂಡಲೇ ಗಮನಹರಿಸಿ ಕೇಂದ್ರ ಶಿಕ್ಷಣ ನೀತಿಯನ್ನು ಜಾರಿಗೊಳಿಸಬೇಕು. ಪ್ರೌಢಶಾಲೆಗೆ ಅನುಮತಿ ನೀಡುವ ವೇಳೆ 9 ರಿಂದ 12 ನೇ ತರಗತಿಯವರೆಗೆ ಎಂದು ನಮೂದಿಸಬೇಕು ಎಂದರು.
ಪ್ರಸಕ್ತ ಶೈಕ್ಷಣಿಕ ಸಾಲಿನ ಆರ್ ಟಿ ಶುಲ್ಕ ಮರುಪಾವತಿಯನ್ನು ಕಳೆದ ಬಾರಿಯಂತೆ ವಿಳಂಬ ನೀತಿ ಅನುಸರಿಸದೆ. ಅಕ್ಟೋಬರ್ ತಿಂಗಳಲ್ಲಿ ಶೇ, 50 ರಷ್ಟು ಹಾಗೂ ಜನವರಿ ತಿಂಗಳಲ್ಲಿ ಶೇ. 50 ರಷ್ಟು ಬಿಡುಗಡೆ ಮಾಡುವ ಮೂಲಕ ಆರ್ ಟಿ ಇ ಶಾಲೆಗೆ ಅನುಕೂಲ ಮಾಡಿಕೊಡಬೇಕೆಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಗೌರವಾಧ್ಯಕ್ಷ ಕಂದನಕೋವಿ ಪ್ರಕಾಶ್, ಎಂ.ಎನ್.ಮಲ್ಲೇಶ್, ಹೆಚ್.ಜಿ.ಪ್ರಕಾಶ್, ವೀರೇಶ್, ಬಿರಾದಾರ್, ಮಂಜುನಾಥ್ ಸ್ವಾಮಿ, ದಿನೇಶ್, ಅಂಗಡಿ ಮಂಜುನಾಥ್ ಮತ್ತಿತರರಿದ್ದರು.



