ಡಿವಿಜಿ ಸುದ್ದಿ, ಬೆಂಗಳೂರು: ಕಾಂಗ್ರೆಸ್ ಪಕ್ಷದಲ್ಲಿ ಹಲವು ಹುದ್ದೆಗಳೂ ಸೇರಿದಂತೆ ರಾಷ್ಟ್ರಪತಿ ಸ್ಥಾನ ಅಲಂಕರಿಸಿದ್ದ ಪ್ರಣಬ್ ಮುಖರ್ಜಿ ಅವರು, ಕೊನೆಗೆ ಆರ್‌ಎಸ್‌ಎಸ್ ಕಾರ್ಯಾಗಾರದಲ್ಲಿ ಪಾಲ್ಗೊಂಡಿದ್ದು ಯಾಕೆ ಎನ್ನುವುದು ಕೊನೆಗೂ ನಿಗೂಢವಾಯಿತು ಎಂದು ರಾಜ್ಯಸಭೆ ಕಾಂಗ್ರೆಸ್ ಸದಸ್ಯ ಮಲ್ಲಿಕಾರ್ಜುನ ಖರ್ಗೆ ಹೇಳಿದರು.
ಕೆಪಿಸಿಸಿ ಕಚೇರಿಯಲ್ಲಿ ನಡೆದ ಶ್ರದ್ಧಾಂಜಲಿ ಸಭೆಯಲ್ಲಿ ಪ್ರಣಬ್ ಮುಖರ್ಜಿ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡಿದರು. ಮುಖರ್ಜಿ ಇಂದಿರಾ ಗಾಂಧಿಯವರ ತತ್ವದ ಮೇಲೆ ನಂಬಿಕೆ ಹೊಂದಿದವರು. ಆರ್‌ಎಸ್‌ಎಸ್ ಕಾರ್ಯಕ್ರಮಕ್ಕೆ ಹೋಗಿದ್ದು ಯಾಕೆ ಎಂಬುದು ತಿಳಿಯಲಿಲ್ಲ ಎಂದರು.

ಈ ಬಗ್ಗೆ ಅವರ ಜೊತೆ ನಾನು ಮಾತನಾಡಬೇಕಿತ್ತು. ಆದರೆ, ಕೊನೆಗೂ ಸಾಧ್ಯವಾಗಲಿಲ್ಲಕಾಂಗ್ರೆಸ್ ಪಕ್ಷವನ್ನು ಪ್ರಣಬ್ ಎತ್ತರಕ್ಕೇರಿಸಿದವರು. ಪ್ರಣಬ್ ಮುಖರ್ಜಿ ದೊಡ್ಡ ವಿಚಾರವಾದಿ. ಅವರ ನಿಧನ ತುಂಬಲಾರದ ನಷ್ಟ ಎಂದು ತಿಳಿಸಿದರು.
ಮಾಜಿ ಸಂಸದ ಕೆ.ಎಚ್.ಮುನಿಯಪ್ಪ ಮಾತನಾಡಿ, ಪ್ರಣಬ್ ಮುಖರ್ಜಿ ಅವರು ಆರ್‌ಎಸ್‌ಎಸ್ ಕಾರ್ಯಕ್ರಮಕ್ಕೆ ಹೋಗುವ ಮೊದಲು ನಾನು ಭೇಟಿಯಾಗಿದ್ದೆ, ಇಲ್ಲಿಯವರೆಗೆ ನೀವು ಪಕ್ಷ ಬೆಳೆಸಿದ್ದೀರಿ. ಈಗ ಆರ್ ಎಸ್ ಎಸ್ ಕಾರ್ಯಾಗಾರಕ್ಕೆ ಹೋಗುತ್ತಿದ್ದೀರಿ, ನಿಮ್ಮ ಹೆಸರಿಗೆ ಕಳಂಕ ಬರುವುದಿಲ್ಲವೇ ಎಂದಿದ್ದೆ. ಸಂದರ್ಭ ಬಂದಾಗ ಒಪ್ಪಿಕೊಳ್ಳಬೇಕಾಗುತ್ತದೆ ಎಂದಿದ್ದರು.
ಈ ಸಂದರ್ಭದಲ್ಲಿ ವಿಪಕ್ಷ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಕಾರ್ಯಾಧ್ಯಕ್ಷರಾದ ಈಶ್ವರ್ ಖಂಡ್ರೆ, ಸಲೀಂ ಅಹ್ಮದ್, ಬಿ.ಎಲ್. ಶಂಕರ್, ವಿ.ಆರ್. ಸುದರ್ಶನ್, ಬಿ.ಎನ್. ಚಂದ್ರಪ್ಪ ಉಪಸ್ಥಿತರಿದ್ದರು.



