ಡಿವಿಜಿ ಸುದ್ದಿ, ಬೆಂಗಳೂರು: ರಾಜ್ಯದಲ್ಲಿ ಎಂದೂ ಕಂಡು ಕೇಳರಿಯದಂತಹ ಆಗಸ್ಟ್ ತಿಂಗಳಲ್ಲಿ ಬಂದಿತ್ತು. ರಾಜ್ಯದ ಜನ ಸಾಕಷ್ಟು ಕಷ್ಟನಷ್ಟಗಳನ್ನು ಅನುಭವಿಸಿದರೂ ಪ್ರಧಾನಿ ನರೇಂದ್ರ ಮೋದಿ ಅವರು ಸಮಸ್ಯೆಗೆ ಕಿವಿಗೊಡಲಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಟೀಕಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನರೇಂದ್ರ ಮೋದಿ ಅವರು ಬಹಳ ದಿನಗಳ ನಂತರ ಕರ್ನಾಟಕಕ್ಕೆ ಬಂದಿದ್ದಾರೆ. ಅವರ ಕರ್ನಾಟಕ್ಕೆ ಬರುವುದಕ್ಕೆ ವಿರೋಧ ಪಕ್ಷವಾಗಿ ಅವರನ್ನು ಸ್ವಾಗತಿಸುತ್ತೇವೆ. ಪ್ರಧಾನಿ ಹುದ್ದೆ ಯಾವ ಪಕ್ಷಕ್ಕೂ ಸೇರಿದ್ದಲ್ಲ ಅವರು 130 ಕೋಟಿ ಜನರ ಪ್ರಧಾನ ಮಂತ್ರಿಗಳು. ರಾಜ್ಯದಲ್ಲಿ ಪ್ರವಾಹ ಬಂದಾಗ ನರೇಂದ್ರ ಮೋದಿ ಬರಲಿಲ್ಲ, ಕನಿಷ್ಠ ಟ್ವೀಟ್ ಮೂಲಕವೂ ಸಾಂತ್ವನ ಹೇಳಲಿಲ್ಲ ಎಂದರು.
ಸಣ್ಣ ಸಣ್ಣ ವಿಚಾರಗಳಿಗೆ ಟ್ವೀಟ್ ಮಾಡುವ ಪ್ರಧಾನಿಗಳು, ಸಂತ್ರಸ್ತರಿಗೆ ಟ್ವೀಟ್ ಮೂಲಕವೂ ಸಾಂತ್ವನ ಹೇಳಲಿಲ್ಲ. 22 ಜಿಲ್ಲೆ 103 ತಾಲ್ಲೂಕುಗಳಲ್ಲಿ ಪ್ರವಾಹ ಬಂದಿತ್ತು. ಅದರೆ, ಅವರು ಜನರ ಕಷ್ಟ ಆಲಿಸುವುದು ಇರಲಿ. 2009ರಲ್ಲಿ ಪ್ರವಾಹ ಬಂದಾಗ ನಮೋಹನ್ ಸಿಂಗ್ ಪ್ರಧಾನಿಯಾಗಿದ್ದಾಗ ರಾಜ್ಯದಲ್ಲಿ ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದರು. ವೈಮಾನಿಕ ಸಮೀಕ್ಷೆ ನಡೆಸಿ, ಸ್ಥಳದಲ್ಲಿಯೇ 1,500 ಕೋಟಿ ಮಧ್ಯಂತರ ಪರಿಹಾರ ಘೋಷಿಸಿ, ಪರಿಹಾರ ನೀಡಿದ್ದರು ಎಂದರು.
ಈ ಬಾರಿಯ ಪ್ರವಾಹದಿಂದ 1 ಲಕ್ಷ ಕೋಟಿ ನಷ್ಟ ಉಂಟಾಗಿದೆ. ಮುಖ್ಯಮಂತ್ರಿ ಯಡಿಯೂರಪ್ಪ 50 ಸಾವಿರ ಕೋಟಿ ಅಂತಾ ಹೇಳಿದ್ರು. ಕೊನೆಗೆ ಕೇಂದ್ರಕ್ಕೆ ವರದಿ ಸಲ್ಲಿಸುವಾಗ 30 ಸಾವಿರ ಕೋಟಿ ಅಂತಾ ವರದಿ ಕೊಟ್ರು. ಆದರೆ, ಕೇಂದ್ರ ಕೊಟ್ಟಿದ್ದು ಕೇವಲ 3 ಸಾವಿರ ಕೋಟಿ ಮಾತ್ರ ಎಂದು ಟೀಕಿಸಿದರು.
ರಾಜ್ಯದಿಂದ 25 ಸಂಸದರನ್ನು ಗೆಲ್ಲಿಸಿ ಕಳುಹಿಸಲಾಗಿದೆ. ಅವರು ಪ್ರಧಾನಿ ಮನೆಯಲ್ಲಿ ಕುಳಿತುಕೊಳ್ಳಬೇಕಿತ್ತು. ಇದೊಂದು ರಾಷ್ಟ್ರೀಯ ವಿಪತ್ತು ಅಂತ ಘೋಷಿಸಿ ಅನ್ನಬೇಕಿತ್ತು. ಆದರೆ ನಿನ್ನೆ ಯಡಿಯೂರಪ್ಪ ಬಹಳ ಗೋಗರೆದು ಕೇಳಿಕೊಂಡ್ರೂ, ಪ್ರಧಾನಿ ಉತ್ತರಿಸಲಿಲ್ಲ.ಕರ್ನಾಟಕದ ಬಗ್ಗೆ ಮೋದಿಗೆ ಇರುವ ಅಸಡ್ಡೆ ಮತ್ತು ನಿರ್ಲಕ್ಷ್ಯ ಇದರಿಂದ ಗೊತ್ತಾಗುತ್ತದೆ. ರಾಜ್ಯದ ಜನರು ಮೋದಿಗೆ ವೋಟ್ ಹಾಕಿ ದೊಡ್ಡ ದ್ರೋಹ ಮಾಡಿದ್ದಾರೆ ಎಂದು ಟೀಕಿಸಿದರು.