ಡಿವಿಜಿ ಸುದ್ದಿ, ಬೆಂಗಳೂರು: ಕೇಂದ್ರ ಸರ್ಕಾರ ಇದುವರೆಗೂ ನೆರೆ ಹಾನಿ ಪರಿಹಾರವನ್ನು ಕೊಟ್ಟಿಲ್ಲ. ಈ ವಿಚಾರವಾಗಿ ಪ್ರಧಾನಿ ಬಳಿ ಹೋಗಿ ಮಾತನಾಡಲು ಯಾರಿಗೂ ಧೈರ್ಯ ಇಲ್ಲ. ಹೀಗಾಗಿ ಇದೊಂದು ಪುಕ್ಕಲ ಸರ್ಕಾರ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕಿಡಿಕಾರಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸರ್ಕಾರ ತಮ್ಮ ಜವಾಬ್ದಾರಿಯನ್ನ ನಿರ್ವಹಿಸದೇ ರಾಜ್ಯದ ಮೇಲೆ ತೆರಿಗೆ ಭಾರ ಹಾಕಲು ಹೊರಟಿದ್ದಾರೆ. ಕೇಂದ್ರ ಸಸರ್ಕಾರ ರಾಜ್ಯಗಳ ಮೇಲೆ ಒತ್ತಡ ಹಾಕುವ ನೀತಿಯನ್ನ ಖಂಡಿಸುತ್ತೇನೆ. ರಾಜ್ಯಕ್ಕೆ ನ್ಯಾಯಯುತವಾಗಿ ಕೊಡಬೇಕಾದ ಜಿಎಸ್‍ಟಿ ಪರಿಹಾರವನ್ನ ಕೊಡಲಿ ಎಂದು ಆಗ್ರಹಿಸಿದರು.
ಕೇಂದ್ರ, ರಾಜ್ಯ ಎರಡು ಕಡೆ ಒಂದೇ ಸರ್ಕಾರ ಇದ್ದರೆ ಅನುಕೂಲ ಆಗುತ್ತೆ ಅಂತ 25 ಸಂಸದರನ್ನ ಆಯ್ಕೆ ಮಾಡಿ ಕಳುಹಿಸಿಕೊಟ್ಟ ಜನರಿಗೆ ವಿಶ್ವಾಸ ದ್ರೋಹ ಮಾಡಿದ್ದಾರೆ. ಇದೊಂದು ಕೆಟ್ಟ ಸರ್ಕಾರ. ಜನ ದ್ರೋಹಿ ಸರ್ಕಾರ ಎಂದು ರಾಜ್ಯ ಮತ್ತು ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.
ಈ ಸಲ ಮತ್ತೊಮ್ಮೆ ಪ್ರವಾಹ ಬಂದಿದೆ. ಆದರೆ, ಹಿಂದಿನ ವರ್ಷದ ಪ್ರವಾಹ ಹಾನಿ ಪರಿಹಾರವನ್ನೇ ಕೊಟ್ಟಿಲ್ಲ. ಯಡಿಯೂರಪ್ಪ ವೈಮಾನಿಕ ಸಮೀಕ್ಷೆ ಮಾಡಿದ್ದಾರೆ. ಆದರೆ ಸಚಿವರುಗಳು ಏನ್ ಮಾಡ್ತಾ ಇದ್ದಾರೆ. ಅದರಲ್ಲೂ ಕಂದಾಯ ಸಚಿವ ಅಶೋಕ್ ಏನು ಮಾಡ್ತಿದ್ದಾರೆ ಎಂದು ಕಿಡಿಕಾರಿದರು.



