ಡಿವಿಜಿ ಸುದ್ದಿ, ಚಿತ್ರದುರ್ಗ : ಕಳೆದ ಲೋಕಸಭಾ ಚುನಾವಣೆಯಲ್ಲಿ ಸೋತಿರುವ ಮಲ್ಲಿಕಾರ್ಜುನ ಖರ್ಗೆ ಆರಿದ ದೀಪದಂತಾಗಿದ್ದು, ಕತ್ತಲೆಯಲಿದ್ದಾರೆ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಕುಟುಕಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಕಟೀಲ್, ನರೇಂದ್ರ ಮೋದಿಯವರು ಜೀರೋ ಕ್ಯಾಂಡಲ್ ಬಲ್ಬ್ ರೀತಿ ಎಂದು ಟೀಕಿಸಿದ್ದ ಮಲ್ಲಿಕಾರ್ಜುನ ಖರ್ಗೆಗೆ ತಿರುಗೇಟು ನೀಡಿದ ಅವರು, ಲೋಕಸಭೆಯಲ್ಲಿ ಸೋತು ದುಃಖದಲ್ಲಿರುವ ಖರ್ಗೆಯನ್ನು ರಾಜಕೀಯವಾಗಿ ಮೇಲೆ ತರುವ ಪ್ರಯತ್ನವನ್ನು ಕಾಂಗ್ರೆಸ್ ಪಕ್ಷ ಮಾಡುತ್ತಿಲ್ಲ. ಕನಿಷ್ಠ ರಾಜ್ಯಸಭಾ ಸದಸ್ಯರನ್ನಾಗಿ ಕೂಡ ಆಯ್ಕೆ ಮಾಡಲಿಲ್ಲ ಎಂದರು.
ಕಾಂಗ್ರೆಸ್ ಪಕ್ಷದ ಮತ್ತೊಂದು ಮುಖ ಜೆಡಿಎಸ್ ಪಕ್ಷವಾಗಿದ್ದು, ಕಾಂಗ್ರೆಸ್ ಪಕ್ಷದ ಒಡೆದು ಆಳುವ ನೀತಿಯನ್ನು ಎಚ್.ಡಿ.ದೇವೇಗೌಡ ಅನುಸರಿಸುತ್ತಿದ್ದಾರೆ. ಹಿಂದೂ ಮುಸ್ಲಿಂ ಭೇದ ಮಾಡುತ್ತಿದ್ದಾರೆ. ಬಿ.ಎಸ್.ಯಡಿಯೂರಪ್ಪ ಅವರೇ ನಮ್ಮ ನಾಯಕರು. ಅವರ ಆಲೋಚನೆಯಂತೆಯೇ ಸಚಿವ ಸಂಪುಟ ವಿಸ್ತರಣೆ ನಡೆಯಲಿದೆ. ಪಕ್ಷದಲ್ಲಿ ಯಾವುದೇ ಭಿನ್ನಮತ ಇಲ್ಲ ಎಂದರು.
ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಸ್ಥಿತಿ ನೋಡಿದರೆ ನೋವು ಆಗುತ್ತದೆ. ಶಾಸಕಾಂಗ ಪಕ್ಷದ ನಾಯಕರಾಗಲು ಹೈಕಮಾಂಡ್ ಎದುರು ಮಂಡಿಯೂರಿದ್ದಾರೆ. ಕೆಪಿಸಿಸಿ ಅಧ್ಯಕ್ಷ ನೇಮಕ ಮಾಡಲು ಕಾಂಗ್ರೆಸ್‌ಗೆ ಇನ್ನೂ ಸಾಧ್ಯವಾಗಿಲ್ಲ ಕಿಡಿಕಾರಿದರು.



