ನವದೆಹಲಿ : ನಾನು ಉಪ ಮುಖ್ಯಮಂತ್ರಿ ಸ್ಥಾನದ ಆಕಾಂಕ್ಷಿ ಅಲ್ಲ, ವರಿಷ್ಠರ ಮುಂದೆ ಡಿಸಿಎಂ ಸ್ಥಾನವನ್ನೂ ಕೇಳಿಲ್ಲ ಎಂದು ಜಲ ಸಂಪನ್ಮೂಲ ಖಾತೆ ಸಚಿವ ರಮೇಶ್ ಜಾರಕಿಹೊಳಿ ಹೇಳಿದ್ದಾರೆ.
ನವದೆಹಲಿಯಲ್ಲಿ ಸುದ್ದಿಗಾರೊಂದಿಗೆ ಮಾತನಾಡಿದ ಅವರು, ಸಿ.ಪಿ. ಯೋಗೇಶ್ವರ್ ಅವರನ್ನು ಪರಿಷತ್ ಗೆ ನಾಮನಿರ್ದೇಶನ ಮಾಡಿದ ಹಿನ್ನೆಲೆ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ ನಡ್ಡಾರನ್ನು ಭೇಟಿ ಮಾಡಿ ಅಭಿನಂದನೆ ಸಲ್ಲಿಸಲಿದ್ದೇವೆ. ಬೇರೆ ಯಾವುದೇ ರಾಜಕೀಯ ಚರ್ಚೆಗಳನ್ನು ನಡೆಸಿಲ್ಲ. ಸಿ.ಪಿ ಯೋಗೇಶ್ವರ್ ಅವರಿಗೆ ಈಗ ನ್ಯಾಯ ಸಿಕ್ಕಿದ್ದು, ಮಂತ್ರಿ ಮಾಡುವುದು ಹೈಕಮಾಂಡ್ ಗೆ ಬಿಟ್ಟದ್ದು ಎಂದರು.
ಕಳೆದ ಬಾರಿಗಿಂತ ಈ ಸಲ ಬೆಳಗಾವಿಯಲ್ಲಿ ಪ್ರವಾಹ ಪರಿಸ್ಥಿತಿಯನ್ನು ಉತ್ತಮ ನಿರ್ವಹಣೆ ಮಾಡಿದ್ದೇವೆ. ಅಗತ್ಯ ಎಲ್ಲ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡಿದ್ದು, ಮಹಾರಾಷ್ಟ್ರದಿಂದ ನೀರು ಬರಲು 48 ಗಂಟೆ ಬೇಕು. ಮೇಲಿನಿಂದ ಬರುವಷ್ಟು ನೀರನ್ನು ಕೆಳಗೆ ಬಿಡಲು ಸೂಚನೆ ನೀಡಲಾಗಿದೆ. ಇದರಿಂದ ಯಾವುದೇ ಸಮಸ್ಯೆ ಆಗುವುದಿಲ್ಲ ಎಂದರು.



