ಡಿವಿಜಿ ಸುದ್ದಿ, ಬೆಳಗಾವಿ: ನಿಮ್ಮಿಂದ ನನಗೆ ಅನ್ಯಾಯವಾಗಿದೆ ಎಂದು ಶಾಸಕ ಮಹೇಶ್ ಕಮ್ಮಟಳ್ಳಿ ಒಂದೇ ಒಂದು ಮಾತನಾಡಿದರೂ, ನಾನು ರಾಜೀನಾಮೆ ನೀಡಲು ಸಿದ್ಧನಿದ್ದೇನೆ ಎಂದು ಜಲ ಸಂಪನ್ಮೂಲ ಖಾತೆ ಸಚಿವ ರಮೇಶ್ ಜಾರಕಿಹೊಳಿ ಹೇಳಿದರು.
ಸುದ್ದಿಗಾರದೊಂದಿಗೆ ಮಾತನಾಡಿದ ಅವರು, ಮಹೇಶ್ ಕಮಟಳ್ಳಿ, ನಾನು ರಾಜೀನಾಮೆ ನೀಡಿದ್ದಕ್ಕೆ ಬಿಜೆಪಿ ಸರ್ಕಾರ ಬಂದಿದೆ. ಅವರಿಗೆ ಯಾವುದೇ ರೀತಿಯ ಅನ್ಯಾಯ ಆಗುವುದಕ್ಕೆ ಬಿಡುವುದಿಲ್ಲ. ಮುಂದಿನ ದಿನಗಳಲ್ಲಿ ಇನ್ನು ಉನ್ನತ ಹುದ್ದೆ ಸಿಗುವ ವಿಶ್ವಾಸವಿದೆ. ನಿಮ್ಮಿಂದ ನನಗೆ ಅನ್ಯಾಯವಾಗಿದೆ ಎಂದು ಮಹೇಶ್ ಕುಮಟಳ್ಳಿ ಒಂದೇ ಒಂದು ಮಾತನಾಡಿದರೂ, ನಾನು ಸಚಿವ ಸ್ಥಾನ ಸೇರಿದಂತೆ ಶಾಸಕ ಸ್ಥಾನಕ್ಕೂ ರಾಜೀನಾಮೆ ನೀಡುತ್ತೇನೆ ಎಂದರು.
ಬೆಳಗಾವಿ ಉಸ್ತುವಾರಿಯನ್ನು ಸಚಿವ ಜಗದೀಶ್ ಶೆಟ್ಟರ್ ಅವರಿಗೆ ನೀಡಿರುವುದಕ್ಕೆ ನಮಗೆ ಬೇಸರವಿಲ್ಲ. ನಾವು ಅವರನ್ನು ಹಾಕಿಸಿಕೊಂಡಿದ್ದೇವೆ. ಅವರು ಎಷ್ಟು ದಿನ ಇರುತ್ತಾರೋ ಅಲ್ಲಿವರೆಗೆ ಇರಲಿ. ಬದಲಾವಣೆ ಮಾಡಿದರೆ, ನಮಗೆ ಜಿಲ್ಲಾ ಉಸ್ತುವಾರಿ ನೀಡುವಂತೆ ಕೇಳಿಕೊಳ್ಳುತ್ತೇವೆ. ನಾನು ರಮೇಶ್ ಕತ್ತಿ, ಉಮೇಶ್ ಕತ್ತಿ, ಬಾಲಚಂದ್ರ ಜಾರಕಿಹೊಳಿ ಸೇರಿಕೊಂಡೇ ಚುನಾವಣೆ ಎದುರಿಸಿದ್ದೇವೆ. ನಮ್ಮ ನಡುವೆ ಉತ್ತಮ ಸಂಬಂಧವಿದೆ ಎಂದರು.



