ಡಿವಿಜಿ ಸುದ್ದಿ, ಮಂಗಳೂರು: ಪೌರತ್ವ ತಿದ್ದುಪಡಿ ಕಾಯ್ದೆ ಪರವಾಗಿ ಜನರಲ್ಲಿ ಜಾಗೃತಿ ಮೂಡಿಸಲು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು 19ರಂದು ಮಂಗಳೂರಿಗೆ ಭೇಟಿ ನೀಡುವುದನ್ನು ವಿರೋಧಿಸಿ ಗೋ ಬ್ಯಾಕ್ ಚಳವಳಿ ನಡೆಸುವುದಾಗಿ ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಸಮಿತಿ ತಿಳಿಸಿದೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಕೆ.ಹರೀಶ್ ಕುಮಾರ್, ಗೋಲಿಬಾರ್ ದಾಳಿಯ ನಂತರ ದಕ್ಷಿಣ ಕನ್ನಡ ಜಿಲ್ಲೆ ಇದೀಗ ಶಾಂತ ಸ್ಥಿತಿಗೆ ಬರುತ್ತಿದೆ.
ಈ ಸ್ಥಿತಿಯಲ್ಲಿ ಅಮಿತ್ ಶಾ ಭೇಟಿ ನೀಡಿದರೆ, ಮತ್ತೆ ಪ್ರಚೋದನೆಗೆ ಕಾರಣವಾಗುತ್ತದೆ. ಆದ್ದರಿಂದ ಅವರ ಭೇಟಿಗೆ ಅವಕಾಶ ನೀಡಬಾರದು ಎಂದು ಆಗ್ರಹಿಸಿದರು.
ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ ಮಾತನಾಡಿ , ಅಮಿತ್ ಶಾ ಭೇಟಿಯಿಂದ ಜಿಲ್ಲೆಯಲ್ಲಿ ಶಾಂತಿ ಕದಡುತ್ತದೆ. ಅದನ್ನು ವಿರೋಧಿಸಿ ನಾವು ಉಪವಾಸ ಸತ್ಯಾಗ್ರಹ ನಡೆಸುತ್ತೇವೆ ಎಂದು ತಿಳಿಸಿದರು.ಗೋಲಿಬಾರ್ ನಲ್ಲಿ ಮೃತರ ಮನೆಗೆ ಈವರೆಗೂ ಜಿಲ್ಲಾ ಉಸ್ತುವಾರಿ ಸಚಿವರಾಗಲಿ, ಸ್ಥಳೀಯ ಶಾಸಕರಾಗಲಿ ಭೇಟಿ ನೀಡಿಲ್ಲ. ಕೇಂದ್ರ ಗೃಹ ಸಚಿವರು ಬರುದಕ್ಕಿಂತ ಮುನ್ನ ಸಚಿವರು, ಶಾಸಕರನ್ನು ಸಂತ್ರಸ್ತರ ಮನೆಗಳಿಗೆ ಕಳುಹಿಸಲಿ ಎಂದರು.



