ಡಿವಿಜಿ ಸುದ್ದಿ, ಮುಂಬೈ: ಮಹಾರಾಷ್ಟ್ರದಲ್ಲಿ ಕೊನೆಗೂ ಶಿವಸೇನೆ, ಕಾಂಗ್ರೆಸ್ ಹಾಗೂ ಎನ್‍ಸಿಪಿ ಮೈತ್ರಿಕೂಟ ಸಾಧಿಸುವಲ್ಲಿ ಯಶಸ್ವಿಯಾಗಿದ್ದು, ಶಿವಸೇನೆ ನಾಯಕ ಉದ್ಧವ್ ಠಾಕ್ರೆ ಮುಖ್ಯಮಂತ್ರಿ ಮಾಡಲು ಎನ್ ಸಿಪಿ, ಕಾಂಗ್ರೆಸ್ ಪಕ್ಷದ ನಾಯಕರು ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ.
ಮುಂಬೈನಲ್ಲಿ ಕಾಂಗ್ರೆಸ್ ಹಿರಿಯ ಮುಖಂಡ ಮಲ್ಲಿಕಾರ್ಜುನ ಖರ್ಗೆ, ಉದ್ಧವ್ ಠಾಕ್ರೆ, ಶರದ್ ಪವಾರ್ ಸೇರಿದಂತೆ ಶಿವಸೇನೆ, ಕಾಂಗ್ರೆಸ್, ಎನ್‍ಸಿಪಿಯ ಅನೇಕ ನಾಯಕರ ಸಭೆ ಬಳಿಕ ಈ ನಿರ್ಧಾರ ಕೈಗೊಳ್ಳಲಾಯಿತು. ನೂತನ ಮೈತ್ರಿ ಸರ್ಕಾರ ರಚನೆ ಹಾಗೂ ಐದು ವರ್ಷಗಳ ಕಾಲ ಉದ್ಧವ್ ಠಾಕ್ರೆ ಅವರನ್ನೇ ಮುಖ್ಯಮಂತ್ರಿ ಮಾಡುವ ವಿಚಾರಕ್ಕೆ ಒಪ್ಪಿಗೆ ಸಿಕ್ಕಿದೆ.

ಎನ್ ಸಿಪಿ ನಾಯಕ ಶರದ್ ಪವಾರ್ ಮಾತನಾಡಿ, ಶನಿವಾರ ಮೂರು ಪಕ್ಷಗಳು ಸೇರಿ ಸುದ್ದಿಗೋಷ್ಠಿ ನಡೆಸಲಿದ್ದೇವೆ. ರಾಜ್ಯಪಾಲರನ್ನು ಭೇಟಿಯಾಗುವ ಬಗ್ಗೆ ನಾಳೆ ನಿರ್ಧರಿಸುತ್ತೇವೆ ಎಂದರು.
ಮೈತ್ರಿ ಸೂತ್ರದ ಪ್ರಕಾರ ಶಿವಸೇನೆ 5 ವರ್ಷಗಳ ಕಾಲ ಮುಖ್ಯಮಂತ್ರಿ ಹುದ್ದೆಯನ್ನು ತನ್ನ ಬಳಿ ಉಳಿಸಿಕೊಳ್ಳಲಿದೆ. ಜೊತೆಗೆ ಶಿವಸೇನೆ ಹಾಗೂ ಎನ್‍ಸಿಪಿ ತಲಾ 14 ಸಚಿವ ಸ್ಥಾನವನ್ನು ಹಂಚಿಕೊಳ್ಳಲಿವೆ. ಮೈತ್ರಿಯ ಭಾಗವಾಗಿರುವ ಕಾಂಗ್ರೆಸ್‍ಗೂ 12 ಸಚಿವ ಸ್ಥಾನ ಸಿಗಲಿದೆ ಎಂಬ ಮಾಹಿತಿ ಇದೆ.
ಬಿಜೆಪಿ 105, ಶಿವಸೇನೆ 56 ಸ್ಥಾನಗಳನ್ನು ಗೆದ್ದರೂ ಅಧಿಕಾರ ಹಂಚಿಕೆ ಕುರಿತು ಎರಡೂ ಪಕ್ಷಗಳಲ್ಲಿ ಭಿನ್ನಾಭಿಪ್ರಾಯ ಉಂಟಾಗಿ ಸರ್ಕಾರ ರಚಿಸಲು ಸಾಧ್ಯವಾಗಲಿಲ್ಲ. ಎರಡೂವರೆ ವರ್ಷಗಳ ಅವಧಿಗೆ ಮುಖ್ಯಮಂತ್ರಿ ಹುದ್ದೆ ನಮಗೆ ಕೊಡಬೇಕೆಂದು ಶಿವಸೇನೆ ಹಠ ಹಿಡಿದಿತ್ತು. ಇದಕ್ಕೆ ಬಿಜೆಪಿ ಒಪ್ಪದ ಹಿನ್ನೆಲೆಯಲ್ಲಿ ಶಿವಸೇನೆ, ಕಾಂಗ್ರೆಸ್ ಹಾಗೂ ಎನ್‍ಸಿಪಿ ಜೊತೆಗೆ ಸೇರಿ ಸರ್ಕಾರ ರಚಿಸಲು ಮುಂದಾಗಿದೆ. ವಿಧಾನಸಭಾ ಚುನಾವಣೆಯಲ್ಲಿ ಎನ್‍ಸಿಪಿ 54 ಸ್ಥಾನ ಹಾಗೂ ಕಾಂಗ್ರೆಸ್ 44 ಸ್ಥಾನ ಪಡೆದುಕೊಂಡಿವೆ.



