ಡಿವಿಜಿ ಸುದ್ದಿ, ಚಿಕ್ಕಮಗಳೂರು: ಸಚಿವ ಸ್ಥಾನಕ್ಕೆ ನೀವು ರಾಜೀನಾಮೆ ಕೊಡನಬೇಕು ಅಂತಾ ಪಕ್ಷ ಸೂಚಿಸಿದ್ರೆ ಸರ್ಕಾರಿ ಕಾರನ್ನು ಇಲ್ಲೇ ಬಿಟ್ಟು, ಬೆಂಗಳೂರಿಗೆ ಬಸ್ಸಿನಲ್ಲಿ ವಾಪಸ್ ಹೋಗ್ತೀನಿ ಎಂದು ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಹೇಳಿದರು.
ನಗರದ ಪ್ರವಾಸಿ ಮಂದಿರದ ಆವರಣದಲ್ಲಿ ವಿವಿಧ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಿ ಅವರು ಮಾತನಾಡಿದರು. ಸಚಿವ ಸ್ಥಾನಕ್ಕಾಗಿ ಜಾತಿ ಆಧಾರದ ಮೇಲೆ ಒತ್ತಡ ತರುವುದು ಸರಿಯಲ್ಲ. ಸಚಿವ ಸಂಪುಟ ವಿಸ್ತರಣೆ ಅತಿ ಶೀಘ್ರದಲ್ಲಿಯೇ ನಡೆಯಲಿದೆ ಎಂದರು.
ಪಕ್ಷದ ಆಂತರಿಕ ವಿಷಯಗಳು ಹೂಕಮಾಂಡ್ ಮಟ್ಟದಲ್ಲಿ ಚರ್ಚೆ ಆಗುತ್ತವೆ. ಪ್ರಧಾನಿ, ರಾಷ್ಟ್ರೀಯ ಅಧ್ಯಕ್ಷರು ಹಾಗೂ ಮುಖ್ಯಮಂತ್ರಿಗಳು ಸೇರಿ ನಿರ್ಣಯ ಮಾಡುತ್ತಾರೆ. ಪಕ್ಷದ ನಿರ್ಣಯ ಹಾಗೂ ತೀರ್ಮಾನಕ್ಕೆ ನಾವೆಲ್ಲ ಬದ್ಧರಾಗಿದ್ದೇವೆ ಎಂದರು.
ಯಾವುದೇ ರಾಜಕಾರಣಿಗೆ ಪಕ್ಷ ಅಂದ್ರೆ ತಾಯಿ ಇದ್ದಂತೆ. ಪಕ್ಷವು ಸದೃಢವಾಗಿರಲು ನಾವು ಪಕ್ಷದ ನಿರ್ಣಯಗಳನ್ನ ಗೌರವಿಸಬೇಕು. ನಾವು ಪಕ್ಷದ ನಿಲುವಿಗೆ ಬದ್ಧರಾಗಿದ್ದು, ಯಾವುದೇ ವ್ಯತ್ಯಾಸ ಮಾಡಲ್ಲ ಎಂದು ತಿಳಿಸಿದರು. ಸಚಿವನಾಗಬೇಕು ಅಂತಾ ಎಲ್ಲರಿಗೂ ಆಸೆ ಇರುತ್ತೆ. ಇದು ಸಾಮಾನ್ಯ ಬೇಡಿಕೆಗಳು. ಯಾರಿಗೆ ಕೊಡಬೇಕು ಅನ್ನೋದನ್ನು ಪಕ್ಷದ ವರಿಷ್ಠರು ಹಾಗೂ ಮುಖ್ಯಮಂತ್ರಿಗಳು ತೀರ್ಮಾನಿಸುತ್ತಾರೆ ಎಂದಿದ್ದಾರೆ.



