ಡಿವಿಜಿ ಸುದ್ದಿ, ದಾವಣಗೆರೆ: ದಾವಣಗೆರೆ ಮಹಾನಗರ ಪಾಲಿಕೆ ಮೇಯರ್ ಚುನಾವಣೆಯಲ್ಲಿ ಬಿಜೆಪಿ ಅಕ್ರಮವಾಗಿ 8 ಎಂಎಲ್ಸಿ ಗಳನ್ನು ಮತದಾರ ಪಟ್ಟಿಯಲ್ಲಿ ಸೇರಿಸಿದ್ದು, ಈ ಎಂಎಲ್ಸಿಗಳನ್ನು ಮೇಯರ್ ಚುನಾವಣೆಯಿಂದ ದೂರವಿಟ್ಟು ಚುನಾವಣೆ ನಡೆಸಬೇಕು ಎಂದು ಕಾಂಗ್ರೆಸ್ ಪಕ್ಷ ಆಗ್ರಹಿಸಿದೆ.
ಈ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕೆಪಿಸಿಸಿ ಮಾಧ್ಯಮ ವಿಶ್ಲೇಷಕ ಡಿ. ಬಸವರಾಜ್, ನಾಳೆ ಮೇಯರ್ ಮತ್ತು ಉಪ ಮೇಯರ್ ಚುನಾವಣೆ ನಡೆಯಲಿದ್ದು, ಸರ್ಕಾರ ಸಿದ್ಧಪಡಿಸಿದ ಮತದಾರ ಪಟ್ಟಿಯಲ್ಲಿ ಬಿಜೆಪಿಯ 8 ಎಂಎಲ್ಸಿಗಳನ್ನು ತರಾತುರಿಯಲ್ಲಿ ಮತದಾರ ಪಟ್ಟಿಯಲ್ಲಿ ಸೇರಿಸಲಾಗಿದೆ. ಇದು ಕಾನೂನಿಗೆ ವಿರುದ್ಧವಾಗಿದ್ದು, ಚುನಾವಣೆಯಲ್ಲಿ ನೀತಿ ನಿಯಮ ಪಾಲನೆ ಮಾಡದೇ ಬಿಜೆಪಿ ಚುನಾವಣೆ ನಡೆಸಲು ಮುಂದಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಈ ಬಗ್ಗೆ ಕಾಂಗ್ರೆಸ್ ಪಾಲಿಕೆ ಸದಸ್ಯರು ಚುನಾವಣೆ ವೀಕ್ಷಕರಾಗಿ ಬಂದ ಹರ್ಷಗುಪ್ತ ಅವರನ್ನು ಭೇಟಿ ಮಾಡಿ, ಚುನಾವಣೆ ಅಕ್ರಮದ ಬಗ್ಗೆ ಮಾಹಿತಿ ನೀಡಿದಾಗ ಅವರು ಪರಿಶೀಲನೆ ನಡೆಸಿದರು. ಆಗ ಯಾವ ಎಂಎಲ್ಸಿಗಳು ಮೂಲ ನಿವಾಸದಲ್ಲಿ ವಾಸವಿಲ್ಲದ ಇಲ್ಲದ ಕಾರಣ ನೋಟಿಸ್ ನೀಡಿದ್ದಾರೆ. ಈ ಬಗ್ಗೆ ಕೋರ್ಟ್ ನಲ್ಲಿಯೂ ಪ್ರಕರಣ ದಾಖಲಾಗಿದೆ. ಹೀಗಾಗಿ ಮತದಾರ ಪಟ್ಟಿಯಿಂದ ಎಂಎಲ್ಸಿಗಳನ್ನು ಕೈ ಬಿಟ್ಟು ಚುನಾವಣೆ ನಡೆಸಬೇಕು ಎಂದು ಮನವಿ ಮಾಡುತ್ತೇವೆ ಎಂದರು .
ಈ ಸಂದರ್ಭದಲ್ಲಿ ದೇವರಮನೆ ಶಿವಕುಮಾರ್, ಕೆ. ಚಮನ್ ಸಾಬ್, ಎ. ನಾಗರಾಜ್, ಅಯೂಬ್ ಪೈಲ್ವಾನ್, ಅಬ್ಲುಲ್ ಲತೀಫ್, ಗಣೇಶ್ ಹುಲ್ಮನಿ ಸೇರಿದಂತೆ ಮತ್ತಿತತರರು ಉಪಸ್ಥಿತರಿದ್ದರು.



