ಡಿವಿಜಿ ಸುದ್ದಿ, ಹರಿಹರ: ನಾನು ಡಿಸಿಎಂ ಆಗಬೇಕು ಎಂದು ಬಯಸಿದ್ದಾರೆ. ಜನರಿಗೆ ಉತ್ತರಿಸುವುದಕ್ಕೆ ಆಗುತ್ತಿಲ್ಲ, ಉತ್ತರಿಸುವ ಸ್ಥಿತಿಯಲ್ಲೂ ನಾನಿಲ್ಲ. ನಾನು ಜನರ ಮುಂದೆ ನಿಸ್ಸಾಹಯಕನಾಗಿದ್ದೇನೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಶ್ರೀರಾಮಲು ತಮ್ಮ ಬೇಸರ ವ್ಯಕ್ತಪಡಿಸಿದರು.
ದಾವಣಗೆರೆ ಜಿಲ್ಲೆಯ ಹರಿಹರ ತಾಲ್ಲೂಕಿನ ರಾಜನಹಳ್ಳಿ ವಾಲ್ಮೀಕಿ ಗುರುಪೀಠದಲ್ಲಿ ಶ್ರೀ ವಾಲ್ಮೀಕಿ ಜಾತ್ರೆಯ ಪೂರ್ವಬಾವಿ ಸಭೆಗೆ ಆಗಮಿಸಿದ ವೇಳೆ ಮಾತನಾಡಿದ ಅವರು, ನನ್ನನ್ನ ಡಿಸಿಎಂ ಮಾಡುವುದು ಬಿಡುವುದು ಪಕ್ಷಕ್ಕೆ ಬಿಟ್ಟ ವಿಚಾರ. ಈ ವಿಚಾರದಲ್ಲಿ ಜನರು ಸ್ವಲ್ಪ ಶಾಂತರಾಗಬೇಕು. ಯಡಿಯೂರಪ್ಪ ನವರು ಈ ರಾಜ್ಯದ ಮುಖ್ಯಮಂತ್ರಿಗಳಾಗಿ ಉತ್ತಮ ಆಡಳಿತ ನಡೆಸುತ್ತಿದ್ದಾರೆ ಎಂದರು.
ಪಕ್ಷಕ್ಕೆ ಮುಜುಗರ ತರುವಂತಹ ಕೆಲಸ ಯಾರೂ ಕೂಡ ಮಾಡಬಾರದು. ಪಕ್ಷದ ನಿರ್ಧಾರಕ್ಕೆ ನಾವು ಬದ್ದರಾಗಿದ್ದೇವೆ. ಉಪಮುಖ್ಯಮಂತ್ರಿ ಮಾಡಬೇಕಾ, ಬೇಡಾವಾ ಎನ್ನುವುದನ್ನು ಹೈಕಮಾಂಡ್ ನಿರ್ಧರಿಸಲಿದೆ. ಈ ಬಗ್ಗೆ ನಾವು ಹೇಳಲು ಹೋದರೆ ಅದು ಪಾರ್ಟಿಯಲ್ಲಿ ನಡೆಯಲ್ಲ. ಯಾಕಂದ್ರೆ ಪಾರ್ಟಿ ಗಟ್ಟಿ ಮುಟ್ಟಾಗಿರುವ ಕಾರಣ ಅವರೇ ನಿರ್ಣಯ ಮಾಡುತ್ತಾರೆ. ಜನರಿಗೆ ಶ್ರೀರಾಮುಲು ಡಿಸಿಎಂ ಆಗಬೇಕು ಎನ್ನುವುದು ಜನರ ಆಸೆ, ಆದರೆ ಒತ್ತಾಯ ಮಾಡಿ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸುವುದಿಲ್ಲ ಎಂದರು.



