ಡಿವಿಜಿ ಸುದ್ದಿ, ದಾವಣಗೆರೆ: ದಾವಣಗೆರೆ ಮಹಾನಗರ ಪಾಲಿಕೆ ಮೇಯರ್ ಮತ್ತು ಉಪಮೇಯರ್ ಚುನಾವಣೆಯಲ್ಲಿ ಅಕ್ರಮ ಮತದಾರ ಪಟ್ಟಿ ವಿಚಾರವಾಗಿ ಸಲ್ಲಿಕೆಯಾಗಿದ್ದ ದೂರನ್ನು ವಿಚಾರಣೆ ನಡೆಸಿದ ಹೈಕೋರ್ಟ್, ನಾಳೆಯೇ (ಫೆ. 19 ) ಚುನಾವಣೆ ಇರುವುದರಿಂದ ನ್ಯಾಯಾಲಯ ಮಧ್ಯ ಪ್ರವೇಶಿಸಲು ಸಾಧ್ಯವಿಲ್ಲವೆಂದು ವಿಚಾರಣೆಯನ್ನು ಫೆ. 24 ಕ್ಕೆ ಮುಂದೂಡಿದೆ.
ಕಾಂಗ್ರೆಸ್ ಮತ್ತು ಬಿಜೆಪಿಯ 12 ಎಂಎಲ್ಸಿ ಗಳು ದಾವಣಗೆರೆ ನಗರ ಮತದಾರರ ಪಟ್ಟಿಯಲ್ಲಿ ಹೆಸರು ಸೇರ್ಪಡೆ ಮಾಡಿಕೊಂಡಿದ್ದರು. ವಿಧಾನಪರಿಷತ್ ಸದಸ್ಯರಿಗೆ ಪಾಲಿಕೆಯಲ್ಲಿ ಮತದಾನದ ಹಕ್ಕು ನೀಡದಂತೆ ಕಾಂಗ್ರೆಸ್ ಪಾಲಿಕೆ ಚುನಾಯಿತ ಸದಸ್ಯರು ಹೈಕೋರ್ಟ್ ನಲ್ಲಿ ಮನವಿ ಮಾಡಿದ್ದರು.
ಮನವಿಯನ್ನು ಪುರಸ್ಕರಿಸಿದ ಹೈಕೋರ್ಟ್ ಇಂದು ವಿಚಾರಣೆ ನಡೆಸಿ ನಾಳೆಯೇ ಪಾಲಿಕೆಯ ಚುನಾವಣೆ ನಡೆಯುವುದರಿಂದ ನ್ಯಾಯಾಲಯ ಮಧ್ಯ ಪ್ರವೇಶಿಸುವುದಿಲ್ಲ. ಆದರೆ ಮತದಾರರ ಪಟ್ಟಿ ಪರಿಷ್ಕರಣೆ ಅಧಿಕಾರಿ ಹರ್ಷಗುಪ್ತಾ ಅವರು ಜಿಲ್ಲಾಧಿಕಾರಿಗಳಿಗೆ ಸಮರ್ಪಕ ತನಿಖೆಗೆ ಆದೇಶಿಸಿದ್ದು, ಜಿಲ್ಲಾಧಿಕಾರಿ ಗಳು ಫೆ. 18 ರಂದು 5-00 ಗಂಟೆಗೆ ವಿವರಣೆ ನೀಡುವಂತೆ ವಿಧಾನಪರಿಷತ್ ಸದಸ್ಯರಿಗೆ ನೋಟೀಸ್ ನೀಡಿದ್ದಾರೆ. ನೋಟೀಸ್ ಗೆ ಪರಿಷತ್ ಸದಸ್ಯರು ನೀಡುವ ಉತ್ತರದ ಮೇಲೆ ಜಿಲ್ಲಾಧಿಕಾರಿಗಳು ಮತ್ತು ಸರ್ಕಾರ ತೆಗೆದುಕೊಳ್ಳುವ ನಿರ್ಧಾರವನ್ನು ಕೋರ್ಟ್ ಗಮನಿಸುತ್ತದೆ ಎಂದು ಈ ಪ್ರಕರಣವನ್ನು ಫೆ. 24ಕ್ಕೆ ಮುಂದೂಡಿದೆ.