ಡಿವಿಜಿ ಸುದ್ದಿ, ದಾವಣಗೆರೆ: ಉಪ ಚುನಾವಣೆಯಲ್ಲಿ ವಿರೋಧ ಪಕ್ಷಗಳಿಗೆ 15 ಕ್ಷೇತ್ರದಲ್ಲಿಯೂ ಸೋಲು ಖಚಿತವಾಗಿದೆ. ಈ ಕಾರಣಕ್ಕೆ ಮತ್ತೆ ಕಾಂಗ್ರೆಸ್ –ಜೆಡಿಎಸ್ ಮೈತ್ರಿ ಸರ್ಕಾರದ ರಚಿಸುವ ಹೊಸ ರಾಗ ಪ್ರಾರಂಭಿಸಿದ್ದಾರೆ ಎಂದು ಗೃಹ ಸಚಿವ ಬಸವರಾಜ್ ಬೊಮ್ಮಾಯಿ ವ್ಯಂಗ್ಯವಾಡಿದರು.
ರಾಣಿಬೆನ್ನೂರು ಕ್ಷೇತ್ರದ ಉಪ ಚುನಾವಣೆಯ ಪ್ರಚಾರಕ್ಕೆ ಹೊರಡುವ ಮುನ್ನ ಜಿಎಂಐಟಿ ಗೆಸ್ಟ್ ಹೌಸ್ ನಲ್ಲಿ ಮಾತನಾಡಿದ ಅವರು, ಉಪ ಚುನಾವಣೆಯಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷಗಳಿಗೆ ಸೋಲುವ ಭೀತಿ ಶುರುವಾಗಿದೆ. ಈ ಹಿನ್ನೆಲೆಯಲ್ಲಿ ಹೊಸ ಮೈತ್ರಿ ರಚಿಸುತ್ತೇವೆ ಎನ್ನುವ ಮೂಲಕ ಒಂದಿಷ್ಟು ವೋಟ್ ಹಾಕಿಸಿಕೊಳ್ಳಬಹುದು ಅನ್ನೋ ಲೆಕ್ಕಾಚಾರದಲ್ಲಿದ್ದಾರೆ. ಇತ್ತೇಚೆಗೆ ಕಾಂಗ್ರೆಸ್ ನ ಹರಿಪ್ರಸಾದ್ ಹಾಗೂ ಮೊಯ್ಲಿ ಮಾತುಗಳನ್ನು ಕೇಳಿದರೆ ಸೋಲುವುದು ಅವರಿಗೆ ಖಚಿತವಾಗಿದೆ ಎಂದರು.
ಕಾಂಗ್ರೆಸ್ ಪಕ್ಷದಲ್ಲಿ ಆಂತರಿಕ ಹೊಂದಾಣಿಕೆ ಇಲ್ಲ. ಸಿದ್ದರಾಮಯ್ಯ ಎಲ್ಲಾ ಕಡೆ ಒಬ್ಬರೇ ಓಡಾಟ ನಡೆಸುತ್ತಿದ್ದಾರೆ. ಉಳಿದವರು ಪತ್ರಿಕಾಗೋಷ್ಠಿಗೆ ಸೀಮಿತವಾಗಿದ್ದಾರೆ. ಕಾಂಗ್ರೆಸ್ ಗೆ ಸೋಲು ಖಚಿತವಾಗಿದ್ದು, ವಿರೋಧ ಪಕ್ಷಗಳಿಗೆ ಕನಸಿನಲ್ಲೂ ಯಡಿಯೂರಪ್ಪ ಬರುವಾಂತಾಗಿದೆ. ಹೀಗಾಗಿ ಇಲ್ಲ ಸಲ್ಲದ ಆರೋಪ ಮಾಡುತ್ತಿದ್ದಾರೆ ಎಂದು ತಿಳಿಸಿದರು.



