ನವದೆಹಲಿ: ರಾಜ್ಯ ಸಚಿವ ಸಂಪುಟ ವಿಸ್ತರಣೆಗೆ ಬಿಜೆಪಿ ರಾಷ್ಟ್ರಾಧ್ಯಕ್ಷ ಜೆ.ಪಿ.ನಡ್ಡಾ ಹಾಗೂ ಕೇಂದ್ರ ಗೃಹ ಸಚಿವ ಅಮಿತ್ ಶಾ ಒಪ್ಪಿಗೆ ಸೂಚಿಸಿದ್ದಾರೆ ಎಂದು ಮುಖ್ಯಮಂತ್ರಿ ಬಿಎಸ್.ಯಡಿಯೂರಪ್ಪ ಹೇಳಿದರು.
ಜೆ.ಪಿ.ನಡ್ಡಾ ಹಾಗೂ ಅಮಿತ್ ಶಾ ಭೇಟಿಯ ಬಳಿಕ ಸುದ್ದಿಗಾರೊಂದಿಗೆ ಮಾತನಾಡಿದ ಅವರು, ಸಚಿವ ಸಂಪುಟ ವಿಸ್ತರಣೆ ಕುರಿತು ಹೈಕಮಾಂಡ್ ನಾಯಕರ ಜೊತೆಗೆ ಅರ್ಧ ಗಂಟೆ ಚರ್ಚೆ ನಡೆಸಿದ್ದೇನೆ. ಸಚಿವ ಸಂಪುಟ ವಿಸ್ತರಣೆಗೆ ಹೈಕಮಾಂಡ್ ಒಪ್ಪಿಗೆ ಸೂಚಿಸಿದ್ದಾರೆ ಎಂದರು.

ನೂತನ ಸಚಿವರ ಪಟ್ಟಿಗೆ ಅವರು ಒಪ್ಪಿಗೆ ಸೂಚಿಸಿದ್ದು, ನೀವು ಯಾವಾಗಬೇಕಾದರೂ ಸಚಿವ ಸಂಪುಟ ವಿಸ್ತರಣೆ ಮಾಡಿ ಅಂತ ಸಲಹೆ ನೀಡಿದ್ದಾರೆ. ಬೆಂಗಳೂರಿಗೆ ಪ್ರಯಾಣ ಬೆಳೆಸಿ, ನಾಳೆ ರಾಜ್ಯದ ಕೆಲ ನಾಯಕರ ಜೊತೆಗೆ ಚರ್ಚಿಸಿ ನಡೆಸುತ್ತೇನೆ. ಎರಡ್ಮೂರು ದಿನದಲ್ಲಿ ಸಂಪುಟ ವಿಸ್ತರಣೆ ಆಗಲಿದೆ ಎಂದು ಹೇಳಿದರು.
ನಾವು ಅಂದುಕೊಂಡಂತೆ ಎಲ್ಲವೂ ಸರಳವಾಗಿ ಆಗಿದೆ. ಇನ್ನೇನು ಎರಡ್ಮೂರು ದಿನಗಳಲ್ಲಿ ಸಂಪುಟ ವಿಸ್ತರಣೆ ಆಗುತ್ತದೆ. ಹೈಕಮಾಂಡ್ ಯಾವುದೇ ಪಟ್ಟಿ ಸಿದ್ಧಪಡಿಸಿಲ್ಲ. ನಾವು ನೀಡಿದ ಪಟ್ಟಿಗೆ ಒಪ್ಪಿಗೆ ಸೂಚಿಸಿದ್ದಾರೆ. ಸಚಿವ ಸಂಪುಟಕ್ಕೆ ಹೊಸದಾಗಿ ಯಾರು ಸೇರುತ್ತಾರೆ ಎನ್ನುವುದು ಎಡ್ಮೂರು ದಿನಗಳಲ್ಲಿ ತಿಳಿಯಲಿದೆ. ಆದರೆ ಉಪ ಮುಖ್ಯಮಂತ್ರಿ ಸ್ಥಾನಗಳ ಹೆಚ್ಚಳವಿಲ್ಲ. ಈಗ ಇರುವರು ಮುಂದುವರಿಯುತ್ತಾರೆ ಎಂದು ಸ್ಪಷ್ಟಪಡಿಸಿದರು.
ಹಣಕಾಸು ಸಚಿವೆ ನಿರ್ಮಾಲಾ ಸೀತಾರಾಮನ್ ಅವರನ್ನು ಭೇಟಿ ಮಾಡಿ ಈ ಬಾರಿಯ ಬಜೆಟ್‍ನಲ್ಲಿ ರಾಜ್ಯಕ್ಕೆ ಹೆಚ್ಚಿನ ಅನುದಾನ ನೀಡುವಂತೆ ಮನವಿ ಮಾಡಿಕೊಂಡಿದ್ದೇನೆ ಎಂದು ತಿಳಿಸಿದರು.



