ಡಿವಿಜಿ ಸುದ್ದಿ, ಮಂಗಳೂರು: ದೇಶದ ಧ್ವಜ ಹಿಡಿಯಲು ಒಪ್ಪದವರು ಇಂದು ತ್ರಿವರ್ಣ ಹಿಡಿದು ಪ್ರತಿಭಟಿಸುತ್ತಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ ಕಟೀಲ್ ಹೇಳಿದರು.
ಬಿಜೆಪಿ ಜಿಲ್ಲಾ ಘಟಕದ ಪದಾಧಿಕಾರಿಗಳ ಪದಗ್ರಹಣ ಸಮಾರಂಭದಲ್ಲಿ ಮಾತನಾಡಿದ ಅವರು, ಸ್ವಾತಂತ್ರ್ಯ ಬಳಿಕ ಕಾಂಗ್ರೆಸ್ ಇಂದಿರಾ ಕೀ, ಸೋನಿಯಾ ಕೀ, ರಾಹುಲ್ ಕೀ ಜೈಕಾರಗಳಿಗೆ ಸೀಮಿತಗೊಂಡಿತು. ಆದರೆ, ಮೋದಿ ಪ್ರಭಾವದಿಂದಾಗಿ ಈಚೆಗೆ ನಡೆದ ಕಾಂಗ್ರೆಸ್ ಅಧಿವೇಶನದಲ್ಲಿ ‘ಭಾರತ್ ಮಾತಾ ಕೀ ಜೈ ಎಂದು ಘೋಷಣೆ ಕೂಗಿದ್ದಾರೆ. ಇನ್ನು ದೇಶದ ಧ್ವಜ ಹಿಡಿಯಲು ಒಪ್ಪದವರು ಇಂದು ತ್ರಿವರ್ಣ ಹಿಡಿದು ಪ್ರತಿಭಟಿಸುತ್ತಿದ್ದಾರೆ ಎಂದರು.
135 ವರ್ಷಗಳ ಇತಿಹಾಸವುಳ್ಳ ಕಾಂಗ್ರೆಸ್, ಇಂದು ವಿರೋಧ ಪಕ್ಷವಾಗಲೂ ನಾಲಾಯಕ್ ಆಗಿದೆ. ಕುಟುಂಬ ರಾಜಕಾರಣ, ಭ್ರಷ್ಟಾಚಾರ ಮತ್ತು ಸಂಘಟನಾ ಶಕ್ತಿ ವೈಫಲ್ಯ ಹಾಗೂ ಬೌದ್ಧಿಕ ವಿಚಾರಗಳಿಂದ ಹೊರಗುಳಿದ ಕಾರಣ ಕಾಂಗ್ರೆಸ್ ಈ ಸ್ಥಿತಿಗೆ ಬಂದಿದೆ. ಕೆಲವು ನಾಯಕರ ಆಟ, ಕೂಟ, ನಡೆದಾಟಕ್ಕೆ ಸೀಮಿತವಾಗಿದೆ. ಸ್ವಾತಂತ್ರ್ಯದ ತನಕ ಮಹಾತ್ಮ ಗಾಂಧಿ ನೇತೃತ್ವದ ಕಾಂಗ್ರೆಸ್ ಅತ್ಯುತ್ತಮವಾಗಿತ್ತು. ನೆಹರೂನಿಂದ ಮನಮೋಹನ್ ಸಿಂಗ್ ವರೆಗೆ ಲಾಲ್ ಬಹದ್ದೂರ್ ಶಾಸ್ತ್ರಿ ಹೊರತುಪಡಿಸಿ ಎಲ್ಲಾ ಕಾಂಗ್ರೆಸ್ ಪ್ರಧಾನಿಗಳ ಮೇಲೆ ಭ್ರಷ್ಟಾಚಾರ ಆರೋಪ ಕೇಳಿಬಂದಿದೆ ಎಂದು ಆರೋಪಿಸಿದರು.
ಭಾರತವನ್ನು ವಿಶ್ವ ಜಗದ್ಗುರು ಮಾಡುವುದೇ ಗುರಿ ಎಂದು ಮೋದಿಯವರು ಹೇಳಿದ್ದಾರೆ. ಆದರೆ, ಪಾಕಿಸ್ತಾನ ಜಿಂದಾಬಾದ್ ಎಂದು ರಾಷ್ಟ್ರ ವಿರೋಧಿ ಘೋಷಣೆ ಕೂಗುವವರಿಗೆ ಕಮ್ಯುನಿಸ್ಟರು ಮಾತ್ರವಲ್ಲ, ಕಾಂಗ್ರೆಸಿಗರೂ ಪ್ರೇರಣೆ ನೀಡುತ್ತಿದ್ದಾರೆ ಎಂದು ಕಿಡಿಕಾರಿದರು.



