ಡಿವಿಜಿ ಸುದ್ದಿ, ಬೆಂಗಳೂರು: ಗುರುವಾರ ರಾಜ್ಯ ಸಚಿವ ಸಂಪುಟ ವಿಸ್ತರಣೆಗೆ ಸಮಯ ನಿಗದಿಯಾಗಿದೆ. ಸಂಪುಟ ವಿಸ್ತರಣೆ ದಿನ ಹತ್ತಿರ ಬರುತ್ತಿದ್ದಂತೆ ಆಕಾಂಕ್ಷಿಗಳ ಪಟ್ಟಿ ದೊಡ್ಡದಾಗುತ್ತ ಹೋಗುತ್ತಿದೆ. ಆದರೆ, ಅಚ್ಚರಿ ಬೆಳವಣಿಗೆಯಲ್ಲಿ ಸೋತಿರುವ ಸಿ.ಪಿ ಯೋಗಿಶ್ವರ್ ಗೆ ಸಚಿವ ಸ್ಥಾನ ಸಿಗುವ ಮುನ್ಸೂಚನೆ ಸಿಕ್ಕಿರುವ ಮೂಲ ಬಿಜೆಪಿಯ 10 ಕ್ಕೂ ಹೆಚ್ಚು ಶಾಸಕರು ಪ್ರತ್ಯೇಕ ಸಭೆ ನಡೆಸಿದ್ದಾರೆ.
ಈ ಸಭೆಯಲ್ಲಿ ಚುನಾವಣೆಯಲ್ಲಿ ಸೋತಿರುವ ಸಿ.ಪಿ.ಯೋಗೇಶ್ವರ ಅವರಿಗೆ ಸಚಿವ ಸ್ಥಾನ ನೀಡಿರುವುದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ ಎನ್ನಲಾಗುತ್ತಿದೆ. ಯೋಗೇಶ್ವರ್ ಅವರಿಗೆ ಯಾವುದೇ ಕಾರಣಕ್ಕೂ ಸಚಿವ ಸ್ಥಾನ ನೀಡಬಾರದು. ಒಂದು ವೇಳೆ ನೀಡುವುದಾದರೆ, ಎಂ.ಟಿ.ಬಿ. ನಾಗರಾಜ್ ಮತ್ತು ಎಚ್.ವಿಶ್ವನಾಥ್ ಅವರಿಗೆ ಸಚಿವ ಸ್ಥಾನ ನೀಡವಂತೆ ಚರ್ಚಿಸಿದ್ದಾರೆ ಎನ್ನಲಾಗುತ್ತಿದೆ. ಮುಖ್ಯಮಂತ್ರಿಯವರ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ, ಶಾಸಕ ಮುರುಗೇಶ ನಿರಾಣಿ, ಪರಣ್ಣ ಮುನವಳ್ಳಿ, ಡಾ.ಶಿವರಾಜ್ ಪಾಟೀಲ, ದತ್ತಾತ್ರೇಯ ಪಾಟೀಲ ರೇವೂರ ಮುಂತಾದ ನಾಯಕರು ಭಾಗಿಯಾಗಿದ್ದರು.

ಇಂದು ಬೆಳಿಗ್ಗೆಯಿಂದಲೇ ಮುಖ್ಯಮಂತ್ರಿ ನಿವಾಸ ಧವಳಗಿರಿ ಮುಂದೆ ಸಚಿವ ಸ್ಥಾನದ ಆಕಾಂಕ್ಷಿಗಳು ಪೆರೇಡ್ ನಡೆಸಿದರು. ಹಿರಿಯ ಮುಖಂಡ ನೆಹರೂ ಓಲೆಕಾರ್ ಮುಖ್ಯಮಂತ್ರಿಯನ್ನು ಭೇಟಿಯಾಗಿ ತಮ್ಮನ್ನು ಸಚಿವ ಸ್ಥಾನಕ್ಕೆ ಪರಿಗಣಿಸಬೇಕು ಎಂದು ಆಗ್ರಹಿಸಿದರು.ಇನ್ನು ಹುಣಸೂರು ಕ್ಷೇತ್ರದಿಂದ ಸೋತಿರುವ ಹಿರಿಯ ಮುಖಂಡ ಎಚ್. ವಿಶ್ವನಾಥ್ ಅವರಿಗೂ ಸಚಿವ ಸ್ಥಾನ ನೀಡಬೇಕು ಎಂದು ಕೆ.ಆರ್.ಪೇಟೆ ಶಾಸಕ ನಾರಾಯಣ ಗೌಡ ಮನವಿ ಮಾಡಿದ್ದಾರೆ ಎನ್ನಲಾಗುತ್ತಿದೆ.
ರಾಜುಗೌಡ ಕಿಡಿ: ಯೋಗೇಶ್ವರ ಅವರಿಗೆ ಸಚಿವ ಸ್ಥಾನ ನೀಡುವುದಾದ್ರೆ ನಾವು ಶಾಸಕರಾಗಿ ಏಕೆ ಮುಂದುವರಿಯಬೇಕು ಎಂದು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಅಭಿವೃದ್ಧಿಯಲ್ಲಿ ಕಲ್ಯಾಣ ಕರ್ನಾಟಕ ಹಿಂದುಳಿದಿದ್ದು, ಸಂಪುಟ ವಿಸ್ತರಣೆಯಲ್ಲಿ ಈ ಭಾಗಕ್ಕೆ ಆದ್ಯತೆ ನೀಡಬೇಕು ಎಂದು ಆಗ್ರಹಿಸಿದ್ದಾರೆ .ನಮ್ಮ ಭಾಗಕ್ಕೆ ಸಚಿವ ಸ್ಥಾನ ನೀಡಬೇಕು ಎಂದು ಆಗ್ರಹಿಸಿ 10 ಜನ ಸೇರಿ ಸಭೆ ಮಾಡಿದ್ದೇವೆ. ಸಚಿವ ಸ್ಥಾನ ನೀಡದಿದ್ದರೆ, ಪಕ್ಷ ಬಿಡಲ್ಲ. ಆದರೆ, ಉತ್ತರ ಕರ್ನಾಕ ಭಾಗಕ್ಕೆ ಪ್ರಾಮುಖ್ಯತೆ ನೀಡಬೇಕು ಎಂಬುದು ನಮ್ಮ ಆಗ್ರಹ ಎಂದಿದ್ದಾರೆ .
ಒಂದೇ ಜಿಲ್ಲೆಗೆ ಆದ್ಯತೆ ನೀಡುವುದು ಎಷ್ಟು ಸರಿ. ನಮ್ಮ ಭಾಗದಲ್ಲಿ ಸುಮಾರು 16 ಶಾಸಕರಿದ್ದಾರೆ. ಬೇಕಿದ್ದರೆ ಲಾಟರಿ ಎತ್ತಿ ಯಾರ ಹೆಸರು ಬರುತ್ತದೆಯೋ ಅವರಿಗೆ ಕೊಡಲಿ. ಹೈಕಮಾಂಡ್ ನ ಲಕ್ಷ್ಮಣ ಸವದಿ ಅವರಿಗೆ ಸಂಪುಟಕ್ಕೆ ತೆಗೆದುಕೊಂಡಿದೆ. ಆ ಬಗ್ಗೆ ಮಾತನಾಡಲ್ಲ. ಇರುವ ಮೂರು ಸಚಿವ ಸ್ಥಾನಗಳ ಪೈಕಿ ಮತ್ತೆ ಸೋತವರಿಗೆ ಕೊಟ್ಟರೆ ಸಹಿಸಲು ಸಾಧ್ಯವಿಲ್ಲ ಎಂದು ಕಿಡಿಕಾರಿದರು.

 
		 
		 
		 
		 
		
 
		
