ಡಿವಿಜಿ ಸುದ್ದಿ, ಹುಬ್ಬಳ್ಳಿ: ಇಡೀ ಜಗತ್ತನ್ನೇ ತಲ್ಲಣಗೊಳಿಸಿದ ಕೊರೊನಾ ವೈರಸ್ ವಿರುದ್ಧದ ಹೋರಾಟದಲ್ಲಿ ಹುಬ್ಬಳ್ಳಿಯ ಕಿಮ್ಸ್ ನಡೆಸಿದ ಚಿಕಿತ್ಸೆ ಯಶಸ್ವಿಯಾಗಿದೆ. ಈ ಮೂಲಕ ರಾಜ್ಯದಲ್ಲಿ ಮೊದಲ ಬಾರಿಗೆ ಹುಬ್ಬಳ್ಳಿಯ ಕಿಮ್ಸ್ ಪಾಸ್ಮಾ ಥೆರಪಿ ಚಿಕಿತ್ಸೆ ಯಶಸ್ಸು ಕಂಡಿದೆ.
ಕೊವೀಡ್ ಸೋಂಕಿತರನ್ನು ಗುಣಮುಖರನ್ನಾಗಿ ಮಾಡಲು ಪಾಸ್ಮಾ ಥೆರಪಿ ಚಿಕಿತ್ಸೆ ಪ್ರಯೋಗ ಮಾಡಲಾಗಿತ್ತು. ಆದರೆ ಹಲವೆಡೆ ಪ್ಲಾಸ್ಮಾ ಥೆರಪಿ ಚಿಕಿತ್ಸೆ ವಿಫಲವಾದ ನಂತರ ಈಗ ಹುಬ್ಬಳ್ಳಿಯ ಪ್ಲಾಸ್ಮಾ ಯಶಸ್ವಿಯಾಗಿದೆ. ಮುಂಬೈನಿಂದ ರಾಜ್ಯಕ್ಕೆ ವಾಪಸ್ ಆಗಿದ್ದ 65 ವರ್ಷದ ಸೋಂಕಿತ ಪಿ-2710 ಪ್ಲಾಸ್ಮಾ ಥೆರಪಿ ಮಾಡಿ ವೈದ್ಯರ ತಂಡ ಯಶಸ್ಸು ಸಾಧಿಸಿದೆ ಎಂದು ನಿರ್ದೇಶಕ ಡಾ. ರಾಮಲಿಂಗಪ್ಪ ಅಂಟರತಾನಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಪ್ಲಾಸ್ಮಾ ಥೆರಪಿ ಚಿಕಿತ್ಸೆಗೆ ನೀಡಲು ಐಸಿಎಂಆರ್ ಅನುಮತಿ ನೀಡಿದ್ದು, ರಾಜ್ಯದಲ್ಲಿ ಮೊದಲಿಗೆ ಹುಬ್ಬಳ್ಳಿಯ ವೈದ್ಯಕೀಯ ಶಿಕ್ಷಣ ಸಂಸ್ಥೆಗೆ ಅನುಮತಿ ನೀಡಲಾಗಿತ್ತು. ಪ್ಲಾಸ್ಮಾ ಥೆರಪಿ ಚಿಕಿತ್ಸೆಗೆ ಕಿಮ್ಸ್ ವೈದ್ಯರು ಸಿದ್ಧತೆ ಮಾಡಿಕೊಂಡಿದ್ದರು. ಆದರೆ ಕೋವಿಡ್ ಸೋಂಕಿನಿಂದ ಗುಣಮುಖರಾದ ರೋಗಿಗಳು ಪ್ಲಾಸ್ಮಾ ನೀಡಲು ಮೊದಲಿಗೆ ಹಿಂದೇಟು ಹಾಕುತ್ತಿದ್ದರು. ಆದರೆ ಕಿಮ್ಸ್ ಆಡಳಿತ ಮಂಡಳಿ ಗುಣಮುಖರಾದವರನ್ನು ಮನವೊಲಿಸಿ ಯಶಸ್ವಿ ಪ್ಲಾಸ್ಮಾ ಥೆರಪಿ ಚಿಕಿತ್ಸೆ ಮಾಡಿದೆ.
ಹಲವಾರು ಸವಾಲುಗಳನ್ನು ಮುಂದಿಟ್ಟುಕೊಂಡು ಕರ್ನಾಟಕ ವೈದ್ಯಕೀಯ ವಿಜ್ಞಾನ ಸಂಸ್ಥೆ ರಾಜ್ಯದಲ್ಲಿಯೇ ಮೊದಲ ಯಶಸ್ವಿ ಪ್ಲಾಸ್ಮಾ ಥೆರಪಿ ಚಿಕಿತ್ಸೆ ಮಾಡುವ ಮೂಲಕ ಎಲ್ಲರ ಹುಬ್ಬೇರುವಂತೆ ಮಾಡಿದೆ. ಈ ಮೂಲಕ ಕಿಮ್ಸ್ ಹೊಸ ಮೈಲಿಗಲ್ಲನ್ನು ಸೃಷ್ಟಿಸಿದೆ.

ಪ್ಲಾಸ್ಮಾ ಥೆರಪಿ ಹೇಗೆ ..?
ಕೊರೊನಾದಿಂದ ಚೇತರಿಸಿಕೊಂಡ ವ್ಯಕ್ತಿಯ ರಕ್ತದಲ್ಲಿ ಆಂಟಿಬಾಡಿಗಳು ಇರುತ್ತವೆ. ಅವು ರೋಗ ನಿರೋಧಕ ಶಕ್ತಿ ಹೊಂದಿರುತ್ತವೆ. ಆ ಪ್ಲಾಸ್ಮಾವನ್ನು ತೆಗೆದು ಸೋಂಕಿತ ಅಥವಾ ಸೋಂಕು ಶಂಕೆ ಹೊಂದಿರುವ ವ್ಯಕ್ತಿಗೆ ನೀಡುವುದನ್ನೇ ಪ್ಲಾಸ್ಮಾ ಥೆರಪಿ ಎನ್ನಲಾಗುತ್ತದೆ. ಪ್ಲಾಸ್ಮಾ ಥೆರಪಿಗೆ ಒಳಗಾದ ವ್ಯಕ್ತಿಗಳು ಬೇಗನೆ ಕೊರೊನಾದಿಂದ ಗುಣಮುಖರಾಗುವುದು ವಿದೇಶಗಳಲ್ಲಿ ಸಾಬೀತಾಗಿದೆ. ಸೋಂಕ ಮುಕ್ತವಾದ ವ್ಯಕ್ತಿ ಚೇತರಿಸಿಕೊಂಡ 28 ದಿನಗಳ ಬಳಿಕ ಪ್ಲಾಸ್ಮಾವನ್ನು ದಾನ ಮಾಡಬಹುದಾಗಿದೆ.



