ಜೈಪುರ: ನಿರ್ಗತಿಕರಿಗೆ ಆಹಾರ ನೀಡುವಾಗ ಸೆಲ್ಫಿ ತೆಗೆಯುವುದು, ವಿಡಿಯೋ ಮಾಡುವುದು ಕಂಡು ಬಂದಲ್ಲಿ ಎಫ್‍ಐಆರ್ ದಾಖಲಿಸಲಾಗುವುದು ಎಂದು ರಾಜಸ್ಥಾನದ ಅಜ್ಮೀರ್ ಜಿಲ್ಲೆಯ ಡಿಸಿ ಖಡಕ್ ಎಚ್ಚರಿಕೆ ನೀಡಿದ್ದಾರೆ.
ಕೊರೊನಾ ವೈರಸ್ ಭೀತಿಯಿಂದ ಇಡೀ ದೇಶ ಲಾಕ್‍ಡೌನ್ ಆಗಿದ್ದು, ಕೆಲವರಿಗೆ ಊಟ ನೀರು ಸಿಗದೆ ಪರಾದಾಡುತ್ತಿದ್ದಾರೆ. ಈ ರೀತಿಯ ನಿರ್ಗತಿಕರಿಗೆ ಕೆಲವರು ಆಹಾರ ನೀಡುವ ಕೆಲಸ ಮಾಡುತ್ತಿದ್ದಾರೆ. ಆದರೆ ಈ ವೇಳೆ ಅವರ ಜೊತೆ ಸೆಲ್ಫಿ ತೆಗೆದುಕೊಳ್ಳಬಾರದು ಎಂದು ಅಜ್ಮೀರ್ ಜಿಲ್ಲೆಯ ಡಿಸಿ ವಿಶ್ವ ಮೋಹನ್ ಶರ್ಮಾ ಆದೇಶ ಹೊರಡಿಸಿದ್ದಾರೆ.

ಈ ವಿಚಾರವಾಗಿ ಮಾತನಾಡಿರುವ ಡಿಸಿ ವಿಶ್ವ ಮೋಹನ್ ಶರ್ಮಾ, ಲಾಕ್‍ಡೌನ್ ಸಮಯದಲ್ಲಿ ನಿರ್ಗತಿಕರಿಗೆ ಬಡವರಿಗೆ ಆಹಾರ ನೀಡುವುದು ಒಳ್ಳೆಯ ಕೆಲಸ. ದೇಶ ಈ ರೀತಿಯ ಸಂಕಷ್ಟಕ್ಕೆ ಸಿಲುಕಿದ ಪರಿಸ್ಥಿತಿಯಲ್ಲಿ ಸಹಾಯ ಮಾಡುವ ಜನರಿಗೆ ನಾವು ಪ್ರೋತ್ಸಾಹ ನೀಡುತ್ತೇವೆ. ಆದರೆ ಇದನ್ನೇ ಮುಂದೆ ಇಟ್ಟುಕೊಂಡು ಬಡವರಿಗೆ ಸಹಾಯ ಮಾಡಿ ಅದರ ಫೋಟೋ ತಗೆದುಕೊಳ್ಳುವುದು ಸರಿಯಲ್ಲ ಎಂದಿದ್ದಾರೆ.
ಊಟವಿಲ್ಲದವರಿಗೆ ಆಹಾರ ನೀಡಿ ಈ ವೇಳೆ ಅವರ ಜೊತೆ ಸೆಲ್ಫಿ ತೆಗೆದುಕೊಂಡು ಅದನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕಬಾರದು. ಇದರಿಂದ ಅವರಿಗೇ ಅವಮಾನ ಮಾಡಿದ ರೀತಿಯಲ್ಲಿ ಆಗುತ್ತದೆ. ಆದ್ದರಿಂದ ಈ ರೀತಿಯ ಪ್ರಕರಣಗಳು ನಮ್ಮ ಜಿಲ್ಲೆಯಲ್ಲಿ ಕಂಡುಬಂದರೆ ಅಂತವರ ವಿರುದ್ಧ ಎಫ್‍ಐಆರ್ ಕೂಡ ಹಾಕಲಾಗುವುದು ಎಂದು ಡಿಸಿ ತಿಳಿಸಿದ್ದಾರೆ.



