ಡಿವಿಜಿ ಸುದ್ದಿ, ಬೆಂಗಳೂರು: 2020-25ರ ಹೊಸ ಪ್ರವಾಸೋದ್ಯಮ ನೀತಿ ಮುಂದಿನ ತಿಂಗಳು ಜಾರಿಗೆ ಬರಲಿದೆ ಎಂದು ಕನ್ನಡ ಮತ್ತು ಸಂಸ್ಕೃತಿ, ಪ್ರವಾಸೋದ್ಯಮ, ಹಾಗೂ ಯುವ ಸಬಲೀಕರಣ ಸಚಿವ ಸಿ.ಟಿ ರವಿ ಹೇಳಿದರು
ಕನ್ನಡ ಮತ್ತು ಸಂಸ್ಕೃತಿ, ಪ್ರವಾಸೋದ್ಯಮ, ಯುವಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಒಂದು ವರ್ಷದ ಸಾಧನೆ ಕೈಪಿಡಿ ಬಿಡುಗಡೆಗೊಳಿಸಿ ಸುದ್ದಿಗೋಷ್ಟಿಯಲ್ಲಿ ಸುದ್ದಿಗೋಷ್ಠಿ ನಡೆಸಿದರು.

ಸ್ಥಳೀಯರಿಗೆ ಉದ್ಯೋಗ, ಪ್ರವಾಸಿ ತಾಣಗಳ ಸರ್ವಾಂಗೀಣ ಅಭಿವೃದ್ದಿ, ಮೂಲಭೂತಸೌಕರ್ಯಗಳಿಗೆ ಒತ್ತು ಹಾಗೂ ಪ್ರವಾಸಿಗರನ್ನು ಆಕರ್ಷಿಸಲು ಇಲಾಖೆ ವಿವಿಧ ಯೋಜನೆಗಳನ್ನು ಹಮ್ಮಿಕೊಂಡಿದೆ ಎಂದರು.
ಇಲ್ಲಿನ ಸಂಪನ್ಮೂಲ ಬಳಸಿಕೊಂಡು ಪ್ರವಾಸಿ ತಾಣಗಳಿಗೆ ದೇಶ-ವಿದೇಶಗಳಿಂದ ಹೆಚ್ಚಿನ ಪ್ರವಾಸಿಗರನ್ನು ಆಕರ್ಷಿಸುವುದು. ಮುಂದಿನ ಮೂರು ವರ್ಷದಲ್ಲಿ ಕರ್ನಾಟಕ ಪ್ರವಾಸದ್ಯೋಮದಲ್ಲಿ ಮೊದಲ ಮೂರು ಸ್ಥಾನದಲ್ಲಿ ಇರುವಂತೆ ಮಾಡುವ ಗುರಿ ಹೊಂದಲಾಗಿದೆ ಎಂದರು.
ಐತಿಹಾಸಿಕ, ಸಾಂಸ್ಕೃತಿಕ ಮತ್ತು ಪಾರಂಪರಿಕ ತಾಣಗಳನ್ನು ಗುರುತಿಸಿ, ಅವುಗಳನ್ನು ಸರ್ವರೀತಿಯಿಂದಲೂ ವಿಶ್ವ ಪ್ರವಾಸೋದ್ಯಮ ಗುಣಮಟ್ಟಕ್ಕೆ ಏರಿಸಲಾಗುವುದು. ಪ್ರಾದೇಶಿಕ ಮಟ್ಟದಲ್ಲಿ ಆಹಾರ ಮೇಳಗಳನ್ನು ನಡೆಸಿ, ಆಹಾರ ಪ್ರಿಯರನ್ನೂ ಸೆಳೆಯುವ ಮೂಲಕ ಖಾದ್ಯಗಳ ಪ್ರವಾಸೋದ್ಯಮ ಬೆಳೆಸಲು ಅವಕಾಶವಿದೆ ಎಂದರು.
ಕರ್ನಾಟಕದಲ್ಲಿ ಈವರೆಗೆ 319 ಪ್ರವಾಸಿ ತಾಣಗಳನ್ನು ಗುರುತಿಸಲಾಗಿದೆ. 20 ವಿಶ್ವವಿಖ್ಯಾತ ಪ್ರವಾಸಿ ತಾಣಗಳ ಅಭಿವೃದ್ಧಿಗೆ ಸಂಬಂಧಿಸಿದಂತೆ ನೀಲನಕ್ಷೆ ಸಿದ್ಧಪಡಿಸಲಾಗಿದ್ದು, ಶೀಘ್ರದಲ್ಲೇ ಅನುಷ್ಠಾನ ಮಾಡಲಾಗುವುದು.ಈ ಬಾರಿ ಕೋವಿಡ್‍ನಿಂದ ಪ್ರವಾಸೋದ್ಯಮ ಕ್ಷೇತ್ರಕ್ಕೆ ಆರ್ಥಿಕ ಹಿನ್ನಡೆ ಉಂಟಾಗಿದ್ದು, ಪ್ರವಾಸಿಗರನ್ನು ಆಕರ್ಷಿಸಲು ಆಧುನಿಕ ತಂತ್ರಜ್ಞಾನ ಅಳವಡಿಸಿಕೊಳ್ಳಲಾಗಿದೆ.2006ರಲ್ಲಿ ಕರ್ನಾಟಕಕ್ಕೆ 36.7 ದಶಲಕ್ಷ ದೇಶಿ ಪ್ರವಾಸಿಗರು ಆಗಮಿಸಿದ್ದರೆ, 2018ರಲ್ಲಿ 215.03 ದಶಲಕ್ಷಕ್ಕೆ ಏರಿಕೆಯಾಗಿದೆ ಎಂದರು.



