ನವದೆಹಲಿ: ಮಾಜಿ ರಾಷ್ಟ್ರಪತಿ ಪ್ರಣವ್ ಮುಖರ್ಜಿ ಅವರ ಅಂತ್ಯ ಸಂಸ್ಕಾರವು ಸೇನೆಯ ಸಕಲ ಗೌರವಗಳೊಂದಿಗೆ ಇಂದು ನಡಯಲಿದೆ. ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಸೋಮವಾರ ನಿಧನರಾಗಿದ್ದರು.
ಸಾರ್ವಜನಿಕ ದರ್ಶನಕ್ಕಾಗಿ ಪ್ರಣವ್ ಮೃತದೇಹವನ್ನು ದೆಹಲಿಯ ರಾಜಾಜಿ ಮಾರ್ಗದಲ್ಲಿರುವ ಅವರ ಅಧಿಕೃತ ನಿವಾಸಕ್ಕೆ ವ್ಯವಸ್ಥೆ ಕಲ್ಪಿಸಲಾಗಿದೆ. ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಅನೇಕ ಗಣ್ಯರು ಇಂದು ಪ್ರಣವ್ ನಿವಾಸಕ್ಕೆ ಭೇಟಿ ನೀಡಿ ಅಂತಿಮ ನಮನ ಸಲ್ಲಿಸಿದರು.
ಕೊರೊನಾ ಮಾರ್ಗಸೂಚಿಯಂತೆ ಅಂತಿಮ ವಿಧಾನ ನಡೆಯಲಿದೆ. ಶವ ಸಾಗಿಸುವ ವಾಹನದಲ್ಲೇ ತೆಗೆದುಕೊಂಡು ಹೋಗಲಾಗುತ್ತದೆ. ಅಂತ್ಯಕ್ರಿಯೆ ಲೋದಿ ರಸ್ತೆಯಲ್ಲಿರುವ ಚಿತಾಗಾರದಲ್ಲಿ ನಡೆಯಲಿದೆ. ಸೆಪ್ಟೆಂಬರ್ 6 ರವರೆಗೆ ದೇಶದಾದ್ಯಂತ ಶೋಕಾಚರಣೆ ಇರಲಿದೆ ಎಂದು ಗೃಹ ಸಚಿವಾಲಯ ತಿಳಿಸಿದೆ.
ಶೋಕಾಚರಣೆ ವೇಳೆ ದೇಶದಾದ್ಯಂತ ರಾಷ್ಟ್ರ ಧ್ವಜವನ್ನು ಅರ್ಧಕ್ಕಿಳಿಸಿ ಹಾರಾಟ ನಡೆಸಲಾಗುವುದು. ಯಾವುದೇ ಅಧಿಕೃತ ಮನರಂಜನಾ ಕಾರ್ಯಕ್ರಮಳಿರುವುದಿಲ್ಲ .
ಭಾರತ ರತ್ನ ಪ್ರಣವ್ ಮುಖರ್ಜಿ ಅವರ ನಿಧನಕ್ಕೆ ಇಡೀ ದೇಶವೇ ದುಃಖಿಸುತ್ತಿದೆ. ನಮ್ಮ ದೇಶದ ಅಭಿವೃದ್ಧಿ ಪಥದಲ್ಲಿ ಅವರ ಅಳಿಸಲಾಗದ ಹೆಜ್ಜೆಗುರುತುಗಳಿವೆ. ಶ್ರೇಷ್ಠ ವಿದ್ವಾಂಸ, ಅತ್ಯುತ್ತಮ ರಾಜಕಾರಣಿಯಾಗಿದ್ದ ಅವರನ್ನು ಸಮಾಜದ ಎಲ್ಲ ವರ್ಗದವರೂ ಮೆಚ್ಚಿಕೊಂಡಿದ್ದರು ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಟ್ವೀಟ್ ಮಾಡಿದ್ದರು.