ಮುಂಬೈ: ಇಡೀ ದೇಶದಲ್ಲಿ ಅತ್ಯಾಧಿಕ ಕೊರೊನಾ ಪಾಸಿಟಿವ್ ಪ್ರಕರಣ ಪತ್ತೆಯಾಗಿರುವ ಮಹಾರಾಷ್ಟ್ರದಲ್ಲಿ ಈಗ ಮಿಡತೆಗಳ ಹಾವಳಿ ಶುರುವಾಗಿದೆ. ಈ ಮಿಡತೆಗಳ ಹಾವಳಿಗೆ ಮಹಾರಾಷ್ಟ್ರದ ನಾಲ್ಕೈದು ಗ್ರಾಮಗಳು ತತ್ತರಿಸಿ ಹೋಗಿವೆ. ಈ ಮಿಡತೆಗಳು ಬೆಳೆದ ಬೆಳೆ ನಾಶ ಮಾಡುವುದರಿಂದ ರೈತರು ಆತಂಕಕ್ಕೆ ಒಳಗಾಗಿದ್ದಾರೆ.

ಈಗಾಗಲೇ ರಾಜಸ್ಥಾನ, ಉತ್ತರ ಪ್ರದೇಶದ ರೈತರ ಜೀವ ಹಿಂಡಿದ್ದ ಮಿಡತೆ ಇದೀಗ ಮಹಾರಾಷ್ಟ್ರಕ್ಕೆ ಎಂಟ್ರಿ ಕೊಟ್ಟಿವೆ. ಹೀಗೆ ಒಂದು ರಾಜ್ಯದಿಂದ ಇನ್ನೊಂದು ರಾಜ್ಯಕ್ಕೆ ವಿಸ್ತರಿಸಿಕೊಳ್ಳುತ್ತಾ ಇಡೀ ಭಾರತಕ್ಕೆ ಕಂಟಕವಾಗುತ್ತಾ ಎಂಬ ಪ್ರಶ್ನೆ ಮೂಡಿದೆ. ಈಗಾಗಲೇ ಇಡೀ ದೇಶದಲ್ಲಿ ಕೊರೊನಾ ಲಾಕ್ ಡೌನ್ ನಿಂದ ಕಂಗೆಟ್ಟಿದ್ದ ಜನರಿಗೆ ಮಿಡತೆ ದಾಳಿ ಇನ್ನುಷ್ಟು ಆತಂಕ ಹೆಚ್ಚಿಸಿದೆ.

ಮಹಾರಾಷ್ಟ್ರದ ಅಮರಾವತಿ ಜಿಲ್ಲೆಯಿಂದ ಮಿಡತೆಗಳ ಹಿಂಡು ಹಾರಿ ಬಂದಿದೆ. ಅಲ್ಲಿಂದ ಅದು ವಾರ್ಧಾಕ್ಕೆ ತಲುಪಿ ಇದೀಗ ನಾಗ್ಪುರದ ಕಟೋಲ್‌ನಲ್ಲಿ ಬಂದು ಸೇರಿದೆ ಎಂದು ಮಹಾರಾಷ್ಟ್ರ ಕೃಷಿ ಇಲಾಖೆಯ ತಿಳಿಸಿದೆ.ಮಿಡತೆಗಳು ರಾತ್ರಿ ಹೊತ್ತು ಸಂಚರಿಸುವುದಿಲ್ಲ. ವಲಸೆ ಹೋಗುವ ಕೀಟಗಳು ಹಗಲು ಹೊತ್ತಿನಲ್ಲಿ ಮಾತ್ರ ಸಂಚರಿಸುತ್ತಿದ್ದು ಗಾಳಿಯ ದಿಶೆಯನುಸರಿಸಿ ಹಾರುತ್ತವೆ. ಇವು ಎಲ್ಲ ರೀತಿಯ ಬೆಳೆಗಳಿಗೆ ಹಾನಿಯುಂಟು ಮಾಡುತ್ತವೆ. ಇವುಗಳು ಹಸಿರೆಲೆಗಳನ್ನು ತಿನ್ನುತ್ತಿದ್ದು, ಎಕರೆಗಟ್ಟಲೆ ಜಮೀನಿನಲ್ಲಿರುವ ಬೆಳೆಗಳನ್ನು ನಾಶ ಮಾಡುತ್ತವೆ ಎಂದು ಮಹಾರಾಷ್ಟ್ರ ಕೃಷಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಉತ್ತರ ಪ್ರದೇಶದ ಮಥುರಾದಲ್ಲಿ ಮಿಡತೆ ದಾಳಿಯನ್ನು ನಿಯಂತ್ರಿಸಲು ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ಪಾಕಿಸ್ತಾನದಿಂದ ಈ ಮಿಡತೆಗಳು ರಾಜಸ್ತಾನ ಮೂಲಕ ಜೈಪುರ ನಗರಕ್ಕೆ ಪ್ರವೇಶಿಸಿವೆ ಎಂದು ಅಂದಾಜಿಸಲಾಗಿದೆ.

ಮಿಡತೆಗಳ ಹಿಂಡು ರಾಜಸ್ಥಾನ, ಪಂಜಾಬ್, ಹರ್ಯಾಣ ಮತ್ತು ಮಧ್ಯ ಪ್ರದೇಶಕ್ಕೆ ತಲುಪಿದೆ. ದೇಶದ ರಾಜಧಾನಿ ದೆಹಲಿಯಲ್ಲಿಯೂ ಮುಂಜಾಗ್ರತೆ ವಹಿಸಲಾಗಿದೆ.ರಾಜಸ್ಥಾನ ಮಿಡತೆ ಹಾವಳಿಯಿಂದ ಕಂಗೆಟ್ಟಿದ್ದು, ನಿರೀಕ್ಷಿತ ಸಮಯಕ್ಕಿಂತ ಮುಂಚೆಯೇ ಇವುಗಳು ಭಾರತಕ್ಕೆ ಬಂದಿವೆ. ಈಗಾಗಲೇ ವಿಶ್ವ ಬೇರೆ ಬೇರೆ ದೇಶದಲ್ಲಿ ಮಿಡತೆಗಳು ದಾಳಿ ಅಪಾಯ ಉಂಟು ಮಾಡಿದ್ದು, ಈ ವರ್ಷ ಮಿಡತೆ ದಾಳಿಯಿಂದ ಭಾರತದ ಕೃಷಿಗೆ ತೀವ್ರ ಅಪಾಯ ಎದುರಾಗಲಿದೆ ಎಂದು ವಿಶ್ವಸಂಸ್ಥೆ ಮುನ್ಸೂಚನೆ ನೀಡಿದೆ.



