ನವದೆಹಲಿ: ದೇಶದಾದ್ಯಂತ ತೀವ್ರವಾಗಿ ಹರಡುತ್ತಿರುವ ಕೊರೊನಾ ಸೋಂಕು ತಡೆಗಟ್ಟಲು ಹಲವು ರಾಜ್ಯ ಸರ್ಕಾರಗಳು ಮತ್ತೆ ಲಾಕ್‌ಡೌನ್ ಜಾರಿಗೊಳಿಸಲು ನಿರ್ಧರಿಸಿವೆ. ಈ ಘೋಷಣೆಯನ್ನು ಆಯಾ ರಾಜ್ಯಗಳು ನಿರ್ಧರಿಸಲಿವೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಬೆಂಗಳೂರಿನಲ್ಲಿ ಒಂದು ವಾರದ ಲಾಕ್‌ಡೌನ್ ಘೋಷಣೆಯಾದ ಬೆನ್ನಲ್ಲೇ ಮಹಾರಾಷ್ಟ್ರದ ಪುಣೆ, ಪಿಂಪ್ರಿ–ಚಿಂಚವಾಡ ಹಾಗೂ ಮುಂಬೈ ಮಹಾನಗರದ ಕೆಲವು ಪ್ರದೇಶಗಳಲ್ಲಿಯೂ ಜುಲೈ 13ರಿಂದ ಲಾಕ್‌ಡೌನ್ ಜಾರಿಗೊಳಿಸಲು ನಿರ್ಧರಿಸಲಾಗಿದೆ. ಅಸ್ಸಾಂ, ಮೇಘಾಲಯ ಮತ್ತು ಅರುಣಾಚಲ ಪ್ರದೇಶಗಳ ಬಹುತೇಕ ಭಾಗಗಳಲ್ಲಿ ಜನ ಮನೆಯಿಂದ ಹೊರಬಾರದಂತೆ ನಿರ್ಬಂಧ ವಿಧಿಸಲಾಗಿದೆ.
ದೇಶದಲ್ಲಿ ಶನಿವಾರ ಒಂದೇ ದಿನ 29,113 ಪ್ರಕರಣಗಳು ವರದಿ ಯಾಗಿವೆ. ಈ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಹಿರಿಯ ಅಧಿಕಾರಿಗಳೊಂದಿಗೆ ವಿಡಿಯೊ ಕಾನ್ಫರೆನ್ಸ್ ನಡೆಸಿ, ದೇಶದ ಸ್ಥಿತಿಗತಿ ಅವಲೋಕಿಸಿದರು. ಪ್ರತಿ ಬೆಳವಣಿಗೆ ಬಗ್ಗೆ ಗಮನಹರಿಸಿ ಯಾವುದೇ ಲೋಪ-ದೋಷ ಆಗದಂತೆ ನಿಭಾಯಿಸಿ ಎಂದು ಸೂಚನೆ ನೀಡಿದರು.
ಇದೇ ವೇಳೆ ದೆಹಲಿ ಸೇರಿತೆ ಇತರೆ ರಾಜ್ಯ ಸರ್ಕಾರಗಳು ಹಾಗೂ ಸ್ಥಳೀಯ ಆಡಳಿತ ಸೋಂಕಿನ ನಿಯಂತ್ರಣಕ್ಕಾಗಿ ನಡೆಸಿರುವ ಪ್ರಯತ್ನಗಳಿಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.



