ನವದೆಹಲಿ: ಈ ಬಾರಿಯ ಸ್ವಾತಂತ್ರ್ಯ ಎಲ್ಲರೂ ಮನೆಯಲ್ಲಿಯೇ ಆಚರಿಸಿ. ಡಿಜಿಟಲ್ ಮಾಧ್ಯಮಗಳನ್ನು ಹೆಚ್ಚು ಬಳಸಿಕೊಂಡು ರಾಷ್ಟ್ರೀಯ ಭಾವೈಕ್ಯತೆ ಮತ್ತು ದೇಶಪ್ರೇಮವನ್ನು ಹೆಚ್ಚಿಸಲು ಕಾರ್ಯಕ್ರಮ ಆಯೋಜಿಸಬೇಕು. ಕಿಟಕಿ, ಬಾಲ್ಕನಿ ಮತ್ತು ಮಹಡಿಗಳಲ್ಲಿ ರಾಷ್ಟಧ್ವಜ ಹಿಡಿದು ಸಂಭ್ರಮದಲ್ಲಿ ಪಾಲ್ಗೊಳ್ಳುವಂತೆ ಕೇಂದ್ರ ಗೃಹ ಸಚಿವಾಲಯ ಕರೆ ನೀಡಿದೆ.
ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮಕ್ಕೆ ಕೊರೊನಾ ವಾರಿಯರ್ಸ್‌ಗಳಾದ ವೈದ್ಯರು, ನರ್ಸ್ , ಪೌರಕಾರ್ಮಿಕರು ಮತ್ತು ಸೋಂಕಿನಿಂದ ಗುಣಮುಖರಾದವರನ್ನು ಆಹ್ವಾನಿಸಿ ಗೌರವಿಸಬೇಕು ಎಂದು ರಾಜ್ಯ ಸರ್ಕಾರಗಳಿಗೆ ಸೂಚನೆ ನೀಡಿದೆ.

ದೆಹಲಿಯ ಕೆಂಪುಕೋಟೆಯಲ್ಲಿ ನರೇಂದ್ರ ಮೋದಿ ತ್ರಿವರ್ಣ ಧ್ವಜ ಹಾರಿಸಲಿದ್ದು, ರಾಜ್ಯಗಳು ರಾಜಧಾನಿ, ಜಿಲ್ಲೆ, ತಾಲ್ಲೂಕು ಮತ್ತು ಗ್ರಾಮ ಪಂಚಾಯಿತಿ ಕೇಂದ್ರಗಳಲ್ಲೂ ಕಾರ್ಯಕ್ರಮ ಎಂದಿನಂತೆ ಆಯೋಜಿಸಬೇಕು. ಸಂಭ್ರಮದಲ್ಲಿ ಹೆಚ್ಚು ಸಂಖ್ಯೆಯಲ್ಲಿ ಜನರು ಭಾಗವಹಿಸದಂತೆ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಬೇಕು. ಸೋಂಕು ನಿವಾರಕ ಬಳಸಿಕೊಳ್ಳಬೇಕು ಎಂದು ಪತ್ರದ ಮೂಲಕ ತಿಳಿಸಿದೆ.

ಕೊರೊನಾ ವಿರುದ್ಧದ ಜನರ ಹೋರಾಟವನ್ನು ಸ್ಮರಿಸುವ ಮತ್ತು ಜನರಲ್ಲಿ ಒಗ್ಗಟ್ಟು ಮತ್ತು ಧೈರ್ಯವನ್ನು ಮೂಡಿಸುವಂತ ಕಾರ್ಯಕ್ರಮಗಳನ್ನು ಆಯೋಜಿಸಬೇಕು. ಡಿಜಿಟಲ್ ವೇದಿಕೆಗಳ ಮೂಲಕ ಶಾಲಾ– ಕಾಲೇಜು ವಿದ್ಯಾರ್ಥಿಗಳಿಗೆ ಕ್ವಿಜ್, ವೆಬಿನಾರ್, ದೇಶಭಕ್ತಿ ಗೀತೆಗಳ ಪ್ರಸ್ತುತಿ, ರಾಷ್ಟ್ರೀಯ ಸೇವಾ ಯೋಜನೆಯ ಕೆಲವು ವಿದ್ಯಾರ್ಥಿಗಳಿಂದ ಭಾಷಣ ಸ್ಪರ್ಧೆಗಳನ್ನು ಆಯೋಜಿಸಬೇಕು. ಪೊಲೀಸ್ ಮತ್ತು ಸೇನೆಯ ಬ್ಯಾಂಡ್ ಪ್ರದರ್ಶನವನ್ನು ಸಾರ್ವಜನಿಕ ಸ್ಥಳಗಳಲ್ಲಿ ದೊಡ್ಡ ಪರದೆಗಳ ಮೂಲಕ ಭಿತ್ತರಿಸಬೇಕು ಎಂದು ಹೇಳಿದೆ.ಕೆಂಪುಕೋಟೆಯಲ್ಲಿ ನಡೆಯುವ ಕಾರ್ಯಕ್ರಮಗಳಲ್ಲಿ ಯಾವುದೇ ಬದಲಾವಣೆಗಳಿಲ್ಲ ಎಂದು ಸಚಿವಾಲಯ ಸ್ಪಷ್ಟಪಡಿಸಿದೆ.



