ಡಿವಿಜಿ ಸುದ್ದಿ, ಹರಿಹರ: ಕೊರೊನಾ ವೈರಸ್ ಮಹಾಮಾರಿಯಿಂದ ಲಾಕ್ ಡೌನ್ ಘೋಷಣೆ ಮಾಡಲಾಗಿದ್ದು, ಜನ ಸಾಮಾನ್ಯರಿಗೆ ತೀವ್ರ ಸಂಕಷ್ಟ ಎದುರಾಗಿದೆ. ಜನ ಸಾಮಾನ್ಯರ ಸಂಕಷ್ಟಗಳಿಗೆ ಸ್ಪಂದಿಸುವ ಸಲುವಾಗಿ ಶಾಸಕ ಎಸ್. ರಾಮಪ್ಪ ರೈತರಿಂದ 300 ಕ್ವಿಂಟಲ್ ಜೋಳ ಖರೀದಿ ಮಾಡಿದ್ದಾರೆ.
ಲಾಕ್ ಡೌನ್ ಹಿನ್ನೆಲೆ ರೈತರು ಬೆಳೆದ ಬೆಳೆಗೆ ಬೆಲೆ ಇಲ್ಲದೆ ಪರದಾಡುತ್ತಿದ್ದಾರೆ. ಇಂತಹ ರೈತರಿಂದ ತಮ್ಮ ತಾಲ್ಲೂಕಿನಲ್ಲಿ 300 ಕ್ವಿಂಟಲ್ ಜೋಳ ಖರೀದಿಸಿ ಬಡವರಿಗೆ ಹಂಚಲು ಮುಂದಾಗಿದ್ದಾರೆ. ದಿನ ನಿತ್ಯ ದುಡಿದು ತಿನ್ನುವವರು ಆಹಾರಕ್ಕಾಗಿ ಪರದಾಡುತ್ತಿದ್ದಾರೆ. ಇಂಥವರಿಗಾಗಿ ಖರೀದಿಸಿದ ಜೋಳವನ್ನು ಹಂಚಲು ನಿರ್ಧರಿಸಿದ್ದಾರೆ. ಎಂಪಿಎಂಸಿ ದರಕ್ಕಿಂತಲೂ 100 ರೂಪಾಯಿ ಹೆಚ್ಚು ಹಣ ಕೊಟ್ಟು ಜೋಳವನ್ನು ಖರೀದಿಸಿದ್ದಾರೆ.

ಹರಿಹರ ವಿಧಾನಸಭಾ ಕ್ಷೇತ್ರದಲ್ಲಿ ಅಗತ್ಯ ವಸ್ತುಗಳನ್ನು ಒಳಗೊಂಡ ಆಹಾರ ಕಿಟ್ ಹಂಚಲು ಶಾಸಕರು ನಿರ್ಧರಿಸಿದ್ದು, ಇದಕ್ಕಾಗಿ 300 ಕ್ವಿಂಟಲ್ ಜೋಳ ಖರೀದಿಸಿದ್ದಾರೆ. ಜೋಳದ ಜೊತೆಗೆ ಅಕ್ಕಿ, ಬೇಳೆ, ಕಾರದ ಪುಡಿ, ಎಣ್ಣೆ ಸೇರಿದಂತೆ ದಿನ ಬಳಕೆ ಅಗತ್ಯ ವಸ್ತುಗಳ ಕಿಟ್ ನೀಡಲಿದ್ದಾರೆ. ಈಗಾಗಲೇ ಆಹಾರ ಕಿಟ್ ಪ್ಯಾಕಿಂಗ್ ಕಾರ್ಯ ನಡೆಯುತ್ತಿದ್ದು, ಇನ್ನೆರಡು ದಿನದಲ್ಲಿ ಆಹಾರ ಕಿಟ್ ವಿತರಣೆ ನಡೆಯಲಿದೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ಶಾಸಕ ಎಸ್. ರಾಮಪ್ಪ, ಇಡೀ ದೇಶದಲ್ಲಿ ಕೊರೊನಾ ವೈರಸ್ ಮಹಾಮಾರಿಗೆ ಜನ ಸಾಮಾನ್ಯರು ತತ್ತರಿಸಿ ಹೋಗಿದ್ದಾರೆ. ಇಂತಹ ಸಂದರ್ಭದಲ್ಲಿ ಜನ ಸಾಮಾನ್ಯರ ನೆರವಿಗೆ ಕೇಂದ್ರ, ರಾಜ್ಯ ಸರ್ಕಾರಗಳು ಬರಬೇಕಿತ್ತು. ಆದರೆ, ಇದುವರೆಗೂ ಆಳುವ ಸರ್ಕಾರಗಳು ಇತ್ತ ಕಡೆ ನೋಡಿಲ್ಲ. ಹೀಗಾಗಿ ನಾವೇ ಸ್ವತಃ ಖರ್ಚಿನಿಂದ ಬಡವರಿಗೆ, ಕೂಲಿ ಕಾರ್ಮಿಕರಿಗೆ ಆಹಾರ ಕಿಟ್ ವಿತರಣೆ ಮಾಡುತ್ತಿದ್ದೇವೆ. ಮುಖ್ಯಮಂತ್ರಿಗಳು ತಮ್ಮ ಪರಿಹಾರ ನಿಧಿಗೆ ಬಂದ ಹಣವನ್ನು ಎಲ್ಲಾ ಕ್ಷೇತ್ರಗಳಿಗೂ ಹಂಚಿಕೆ ಮಾಡಬೇಕು ಎಂದು ಒತ್ತಾಯಿಸಿದರು.



