ಡಿವಿಜಿ ಸುದ್ದಿ, ಬೆಂಗಳೂರು: ಕೊರೊನಾ ವೈರಸ್ ಲಾಕ್‍ಡೌನ್ ನಿಂದಾಗಿ ವಿದೇಶಗಳಲ್ಲಿರುವ ಕನ್ನಡಿಗರನ್ನು ರಾಜ್ಯಕ್ಕೆ ಕರೆತರುವ ಪ್ರಕ್ರಿಯೆ ಆರಂಭವಾಗಿದೆ ಎಂದು ಸಚಿವ ಸುರೇಶ್ ಕುಮಾರ್ ತಿಳಿಸಿದ್ದಾರೆ.
ಹೊರ ದೇಶಗಳಲ್ಲಿರುವ ಭಾರತೀಯರನ್ನು ಕರೆ ತರಲು ಕೇಂದ್ರ ಸರ್ಕಾರ ಮುಂದಾಗಿದೆ. ವಿದೇಶಗಳಲ್ಲಿ 10,823 ಜನ ಕನ್ನಡಿಗರಿದ್ದಾರೆ. ಮೊದಲ ಹಂತದಲ್ಲಿ 6,100 ಜನ ವಿದೇಶದಿಂದ ವಾಪಸ್ ಆಗಲಿದ್ದಾರೆ. ಸೌದಿ ಅರೇಬಿಯ, ಕೆನಡಾ, ಇಂಗ್ಲೆಂಡ್ ಮುಂತಾದ ದೇಶಗಳಲ್ಲಿ ಕನ್ನಡಿಗರನ್ನು ಮೊದಲ ಹಂತದಲ್ಲಿ ವಾಪಸ್ ಕರೆ ತರಲಾಗುವುದು. ವಾಪಸ್ ಬಂದವರನ್ನು ಕ್ವಾರಂಟೈನ್ ನಲ್ಲಿರಿಸಿ ಅವರ ಆರೋಗ್ಯದ ಮೇಲೆ ನಿಗಾ ಇಡಲು ವ್ಯವಸ್ಥೆ ಮಾಡಿಕೊಳ್ಳಲಾಗಿದೆ.
ಈ ಪೈಕಿ 4408 ಪ್ರವಾಸಿಗರು, 3074 ವಿದ್ಯಾರ್ಥಿಗಳು, 2284 ವೃತ್ತಿಪರ ಕೆಲಸ ಮಾಡುವವರು ಇದ್ದಾರೆ. ಅವರನ್ನು ಏರ್ ಪೋರ್ಟ್ ಗಳಲ್ಲಿ ಸ್ಕ್ರೀನಿಂಗ್ ಮಾಡಿ ಅವರ ದೇಹ ಪರಿಸ್ಥಿತಿಗೆ ಅನುಗುಣವಾಗಿ ಅವರಿಗೆ ಅವಶ್ಯಕ ಶುಶ್ರೂಶೆ ಒದಗಿಸಲಾಗುವುದು ಎಂದು ತಿಳಿಸಿದರು.
ಬೆಂಗಳೂರು ನಗರದಲ್ಲಿ ಕೋವಿಡ್ ಸೇವೆಯಲ್ಲಿ ಅವಿರತವಾಗಿ ತೊಡಗಿಸಿಕೊಂಡಿರುವ ಸರ್ಕಾರಿ ನೌಕರರ ಆರೋಗ್ಯ ತಪಾಸಣೆ ಮಾಡಲು ಆರೋಗ್ಯ ಇಲಾಖೆ ಮುಂದಾಗಿದ್ದು, ಇಂದಿನಿಂದ ಬೆಂಗಳೂರಿನ ಕೆ.ಸಿ.ಜನರಲ್ ಆಸ್ಪತ್ರೆಯಲ್ಲಿ ತಪಾಸಣಾ ಅಭಿಯಾನವು ಪ್ರಾರಂಭವಾಗಲಿದೆ ಎಂದು ಸಚಿವ ಸುರೇಶ್ ಕುಮಾರ್ ಹೇಳಿದರು.
ಅದೇ ರೀತಿ ಗುಣಮುಖರಾಗಿ ಹಿಂತಿರುಗಿರುವ ವ್ಯಕ್ತಿಗಳಿಗೆ ನಂತರದ ದಿನಗಳಲ್ಲಿ ಕ್ವಾರಂಟೈನ್ ಅನ್ನು ಯಾವ ರೀತಿಯಲ್ಲಿ ಅನುಸರಿಸಬೇಕೆಂಬ ಬಗ್ಗೆ ಸಹ ಮಾರ್ಗದರ್ಶಿ ಸೂತ್ರಗಳನ್ನು ರಾಜ್ಯದ ಆರೋಗ್ಯ ಇಲಾಖೆ ಹೊರಡಿಸಿದೆ ಎಂದು ಅವರು ಹೇಳಿದರು.
https://www.facebook.com/nimmasuresh/videos/3427049297322391/



