ಡಿವಿಜಿ ಸುದ್ದಿ, ಬೆಂಗಳೂರು: ಮಂಗಳೂರು ಪೊಲೀಸರು ನಡೆಸಿದ ಚುರುಕಿನ ತನಿಖೆಯಿಂದ ಆರೋಪಿ ಭಯಗೊಂಡು ಬೆಂಗಳೂರಿಗೆ ಬಂದು ಪೊಲೀಸರಿಗೆ ಶರಣಾಗಿದ್ದಾನೆ ಎಂದು ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಹೇಳಿದ್ದಾರೆ.
ಬಾಂಬ್ ಪತ್ತೆ ಪ್ರಕರಣಕ್ಕೆ ಸಬಂಧಿಸಿದಂತೆ ಸಿಕ್ಕ ಸಿಸಿಟಿವಿ ದೃಶ್ಯಾವಳಿ, ಆಟೋ ಹಾಗೂ ಇತರೆ ಸಾಕ್ಷ್ಯಗಳ ಜಾಲ ಹುಡುಕಿ ಹೊರಟಾಗ ಆದಿತ್ಯ ರಾವ್ ಬಗ್ಗೆ ಮಾಹಿತಿ ಸಿಕ್ಕಿತ್ತು. ಉಡುಪಿಯಲ್ಲಿರುವ ಆತನ ಮನೆಗೆ ಹೋಗಿ ಕುಟುಂಬಸ್ಥರ ಬಳಿ ಪೊಲೀಸರು ಆರೋಪಿಯ ಬಗ್ಗೆ ಮಾಹಿತಿ ಕಲೆ ಹಾಕಿದ್ದರು.
ಮೂರು ತನಿಖಾ ತಂಡ ರಚಿಸಿ ಈ ಸಂಬಂಧ ತನಿಖೆ ನಡೆಸಲಾಗುತ್ತಿತ್ತು. ಆದರೆ ಆರೋಪಿ ಉಡುಪಿಯಿಂದ ಬೆಂಗಳೂರಿಗೆ ಬಂದು ಪೊಲೀಸರಿಗೆ ಶರಣಾಗಿದ್ದಾನೆ. ಈ ಕೃತ್ಯವೆಸಗಲು ಏನು ಕಾರಣ? ಆತನ ಹಿಂದೆ ಯಾರಿದ್ದಾರೆ? ಎನ್ನುವ ಎಲ್ಲಾ ಮಾಹಿತಿ ತನಿಖೆ ಬಳಿಕವಷ್ಟೇ ತಿಳಿದು ಬರಲಿದೆ ಎಂದರು.
ಈ ಪ್ರಕರಣದಲ್ಲಿ ಮಂಗಳೂರು ಪೊಲೀಸರ ದಕ್ಷತೆ ಮತ್ತು ಪ್ರಾಮಾಣಿಕತೆ ಸ್ಪಷ್ಟವಾಗಿ ಕಾಣಿಸುತ್ತಿದೆ. ಅನಾವಶ್ಯಕವಾಗಿ ಪೊಲೀಸರ ಬಗ್ಗೆ ಟೀಕೆ ಮಾಡಿ ಅವರ ನೈತಿಕತೆ ಕುಗ್ಗಿಸುವ ಕೆಲಸವನ್ನು ಯಾರು ಮಾಡಬಾರದು. ನಾವು ಮೊದಲು ಆರೋಪಿ ಇಂತಹ ಸಂಘಟನೆಗೆ ಸೇರಿದವರು ಅಥವಾ ಇಂತಹ ವ್ಯಕ್ತಿ ಎಂದು ಹೇಳಿರಲಿಲ್ಲ. ಯಾರೇ ಆರೋಪಿ ಆದರು ಅವನನ್ನು ಕಂಡು ಹಿಡಿಯುತ್ತೇನೆ ಎಂದಿದ್ದೆವು. ಆ ಪ್ರಕಾರ ಪೊಲೀಸರು ಪ್ರಾಮಾಣಿಕವಾಗಿ ತಮ್ಮ ಕರ್ತವ್ಯ ನಿರ್ವಹಿಸಿದ್ದಾರೆ ಎಂದು ಗೃಹ ಸಚಿವರು ಪೊಲೀಸರನ್ನು ಶ್ಲಾಘಿಸಿದರು.
ಸರ್ಕಾರಿ ಬಸ್ ಅಥವಾ ಸಾಮಾನ್ಯ ಬಸ್‍ಗಳಲ್ಲಿ ಆತ ಬೆಂಗಳೂರಿಗೆ ಬಂದಿಲ್ಲ. ಪೊಲೀಸರ ಕಣ್ತಪ್ಪಿಸಿ ರಾತ್ರೋರಾತ್ರಿ ಬೆಂಗಳೂರಿಗೆ ಬಂದಿದ್ದಾನೆ. ಉಗ್ರ ಸಂಘಟನೆ ಜೊತೆ ಆರೋಪಿಗೆ ಲಿಂಕ್ ಇದೆಯೇ? ಇಲ್ಲವಾ? ಎನ್ನೋದು ಮುಂದಿನ ತನಿಖೆಯಲ್ಲಿ ಪತ್ತೆಯಾಗುತ್ತೆ ಎಂದರು.ಸಾಮಾನ್ಯವಾಗಿ ಬಾಂಬ್ ಪತ್ತೆ, ಬ್ಲಾಸ್ಟ್ ಪ್ರಕರಣ ನಡೆದಾಗ ಕೇಂದ್ರ ಸರ್ಕಾರಕ್ಕೆ ಮಾಹಿತಿ ತಲುಪಿರುತ್ತದೆ. ಈಗಾಗಲೇ ರಾಷ್ಟ್ರೀಯ ಭದ್ರತಾ ಗಾರ್ಡ್ ಸಿಬ್ಬಂದಿ ಮಂಗಳೂರು ಏರ್‌ಪೋರ್ಟ್ ಹಾಗೂ ಇತರೆ ಪ್ರದೇಶಗಳಲ್ಲಿ ತನಿಖೆ ನಡೆಸುತ್ತಿದ್ದಾರೆ
ಆರೋಪಿಯು ಪದವಿಧರನಾಗಿದ್ದು, ಮಂಗಳೂರಿನಲ್ಲಿ ಕೆಲಸ ಪಡೆಯುವಲ್ಲಿ ವಿಫಲವಾಗಿದ್ದನು. ಈ ಹಿಂದೆ ಮಂಗಳೂರಿನ ವಿಮಾನ ನಿಲ್ದಾಣದಲ್ಲಿ ಸೆಕ್ಯೂರಿಟಿ ಆಗಿ ಕೆಲಸಕ್ಕೆ ಸೇರಲು ಪ್ರಯತ್ನಿಸಿದ್ದ ಎಂದು ತಿಳಿದ ಬಂದಿದೆ.