ಡಿವಿಜಿ ಸುದ್ದಿ, ಬಳ್ಳಾರಿ: ದೀಪ ಹಚ್ಚಿ ಎಂದಾಗ ಹಚ್ವಿದೆವು, ಗಂಟೆ ಬಾರಿಸಿ ಎಂದಾಗ ಬಾರಿಸಿದ್ದೇವೆ, ಇನ್ಮುಂದೆ ಸುಮ್ಮನೆ ಕೂರುವುದಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಸರ್ಕಾರ ವಿರುದ್ಧ ಕಿಡಿಕಾರಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಾರ್ಚ್ ತಿಂಗಳಿಂದ ರಾಜ್ಯ ಹಾಗೂ ರಾಷ್ಟ್ರದಲ್ಲಿ ಕೊರೊನಾ ಅಟ್ಟಹಾಸ ಮೆರೆಯುತ್ತಿದೆ. ಕೇಂದ್ರ ಸರ್ಕಾರ ಗಂಟೆ ಬಾರಿಸಿ, ದೀಪ ಹಚ್ಚಿ ಎಂದು ಹೇಳಿದ ಹಾಗೆ ನಾವು ಮಾಡಿದ್ದೇವೆ, ಆದರೆ ಇನ್ನು ಮುಂದೆ ಸರ್ಕಾರ ಕೊರೊನಾ ನಿಯಂತ್ರಣದ ಹೆಸರಲ್ಲಿ ಲೂಟಿ ಹೊಡೆಯಲು ಬಿಡುವುದಿಲ್ಲ ಎಂದರು.
ಸರ್ಕಾರ ಕೊರೊನಾ ನಿಯಂತ್ರಿಸುವಲ್ಲಿ ವಿಫಲವಾಗಿದೆ. ಸರ್ಕಾರದ ಬ್ರೇಕ್ ಫೇಲ್ ಆಗಿದೆ. ರಾಜ್ಯದಲ್ಲಿ ಸೋಂಕಿತ ಕಷ್ಟದ ಕಥೆಯ ಸಾಕಷ್ಟು ಸಿನಿಮಾ ತೆಗೆಯಬಹುದು. ಒಬ್ಬ ಮಾಜಿ ಮಂತ್ರಿ ಕೊರೊನಾ ಆಸ್ಪತ್ರೆ ಬಿಲ್ 17 ಲಕ್ಷ ಆಗಿದೆ. ಹಾಗದ್ರೆ, ಬಡವರ ಪರಿಸ್ಥಿತಿ ಹೇಗೆ ಎಂದು ಪ್ರಶ್ನಿಸಿದರು.



