ಡಿವಿಜಿ ಸುದ್ದಿ, ಹರಿಹರ: ತಾಲೂಕಿನ ಕೆರೆಗಳ ಅಭಿವೃದ್ಧಿಗಾಗಿ 60 ಕೋಟಿ ಅನುದಾನ ನಿಡುವಂತೆ ಸರ್ಕಾರಕ್ಕೆ ಶೀಘ್ರವೇ ಪ್ರಸ್ತಾವನೆ ಸಲ್ಲಿಸುವುದಾಗಿ ಶಾಸಕ ಎಸ್.ರಾಮಪ್ಪ ಹೇಳಿದರು.
ತಾಲ್ಲೂಕಿನ ಕೊಂಡಜ್ಜಿ ಕೆರೆ ತುಂಬಿರುವ ಹಿನ್ನೆಲೆಯಲ್ಲಿ ಕೆರೆಗೆ ಬಾಗಿನ ಅರ್ಪಿಸಿ ನಂತರ ಮಾತನಾಡಿದ ಅವರು, ಕೊಂಡಜ್ಜಿ ಕೆರೆಯು ಕಳೆದ ಐದು ವರ್ಷಗಳಿಂದ ಬೀಕರ ಬರಗಾಲಕ್ಕೆ ಒಳಗಾಗಿ ನೀರಿಲ್ಲದೆ ಬರಿದಾಗಿತ್ತು .ಈ ವರ್ಷ ಮಳೆರಾಯನ ಕೃಪೆಯಿಂದ ಈ ಕೆರೆ ತುಂಬಿದೆ. ಇದರಿಂದ ಈ ಭಾಗದ ರೈತರಿಗೆ ಅನುಕೂಲವಾಗಿದೆ.

ಇದೇ ರೀತಿ ತಾಲ್ಲೂಕಿನ ಕೊಮರನಹಳ್ಳಿ ಕೆರೆ, ಅಗಸನಕಟ್ಟೆ ಕೆರೆ, ಚಂದಪ್ಪನ ಕೆರೆ ಹಾಗೂ ಉಳಿದ ಎಲ್ಲಾ ಕೆರೆಗಳನ್ನು ತುಂಬಿಸಲು 60 ಕೋಟಿ ಅನುದಾನ ನೀಡುವಂತೆ ಸರ್ಕಾರಕ್ಕೆ ಮನವಿ ಮಾಡಿದ್ದೇನೆ. ಶೀಘ್ರದಲ್ಲಿ ಕೆರೆಗಳನ್ನು ಅಭಿವೃದ್ಧಿ ಪಡಿಸಲು ನಾನು ಶ್ರಮಿಸುತ್ತೇನೆ ಎಂದು ಭರವಸೆ ನೀಡಿದರು.
ತಾಲ್ಲೂಕು ಪಂಚಾಯಿತಿ ಮಾಜಿ ಸದಸ್ಯ ಹೆಚ್.ಹೆಚ್ ಬಸವರಾಜ್ ಮಾತನಾಡಿ, ಹಳ್ಳಿಗಳಲ್ಲಿ ಕೆರೆಗಳು ಉಳಿದರೆ ಭೂಮಿಯಲ್ಲಿ ಅಂತರ್ಜಲ ಹೆಚ್ಚಾಗುತ್ತದೆ. ಇದರಿಂದ ರೈತರು ಖುಷಿಯಿಂದ ಬೆಳೆ ಬೆಳೆಯುತ್ತಾರೆ. ತಾಲ್ಲೂಕಿನಲ್ಲಿ ಒತ್ತುವರಿಯಾಗಿರುವ ಕೆರೆಗಳನ್ನು ಸರ್ವೇ ಮಾಡಿಸಿ, ಕೆರೆಗಳನ್ನು ಅಭಿವೃದ್ಧಿ ಪಡಿಸಲು ಶಾಸಕರು ಮುಂದಾಗಲಿ ಎಂದರು.
ಎಂ.ಎಲ್.ಸಿ ಮೋಹನ್ ಕೊಂಡಜ್ಜಿ ಮಾತನಾಡಿ, ನನ್ನ ವಿಶೇಷ ಅನುದಾನದಲ್ಲಿ ಕೊಂಡಜ್ಜಿ ಕೆರೆ ಸೇರಿದಂತೆ
ಸ್ಕೌಟ್ಸ್ ಅಂಡ್ ಗೈಡ್ಸ್ ಕೇಂದ್ರವನ್ನು ಅಭಿವೃದ್ಧಿ ಪಡಿಸಲು ಶ್ರಮವಹಿಸುವಿದಾಗಿ ತಿಳಿಸಿದರು.
ತಾ.ಪ. ಅಧ್ಯಕ್ಷೆ ಶ್ರೀದೇವಿ ಮಂಜಪ್ಪ. ಗ್ರಾ.ಪಂ ಅಧ್ಯಕ್ಷೆ ವಿಶಾಲಾಕ್ಷಮ್ಮ. ಮುಖಂಡರಾದ ನಿಖಿಲ್ ಕೊಂಡಜ್ಜಿ, ಕೆ.ಬಿ ಮಲ್ಲಿಕಾರ್ಜುನ್, ನಾಗರಾಜ್, ತಿಪ್ಪೇಶ್, ಉಮ್ಮಣ್ಣ, ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.



