ಡಿವಿಜಿ ಸುದ್ದಿ, ಬೆಂಗಳೂರು: ರಾಜ್ಯದಲ್ಲಿ ನೈರುತ್ಯ ಮುಂಗಾರು ಚುರುಕುಗೊಂಡಿದ್ದು, ಕರಾವಳಿ ಹಾಗೂ ದಕ್ಷಿಣ ಒಳನಾಡಿನ ಹಲವು ಜಿಲ್ಲೆಗಳಲ್ಲಿ ಜು.10ರಿಂದ 14ರವರೆಗೆ ಮಳೆಯ ಅಬ್ಬರ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಚಿಕ್ಕಮಗಳೂರು, ಹಾಸನ, ಕೊಡಗು, ಶಿವಮೊಗ್ಗ, ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳಲ್ಲಿ ಭಾರಿ ಮಳೆ ಸಾಧ್ಯತೆಯಿದ್ದು, ಯೆಲ್ಲೊ ಅಲರ್ಟ್ ಘೋಷಿಸಲಾಗಿದೆ.
ಉತ್ತರ ಕನ್ನಡ ಜಿಲ್ಲೆಯ ಕದ್ರಾದಲ್ಲಿ ಗರಿಷ್ಠ 17 ಸೆಂ.ಮೀ. ಮಳೆಯಾಗಿದೆ. ಹೊಸನಗರ 15, ಕೊಲ್ಲೂರು, ಗೋಕರ್ಣ 10, ಭಟ್ಕಳ, ಹೊನ್ನಾವರ 8, ಕಾರ್ಕಳ 7, ಕೋಲಾರ 6, ಸುಬ್ರಹ್ಮಣ್ಯ, ಕಾರವಾರ, ತೀರ್ಥಹಳ್ಳಿ, ಗುಡಿಬಂಡೆ 5, ಮೂಡುಬಿದಿರೆ, ಕುಂದಾಪುರ, ಮಾಲೂರು, ಚನ್ನಪಟ್ಟಣ 4, ಸುಳ್ಯ, ಉಡುಪಿ, ಜಮಖಂಡಿ, ಭಾಗಮಂಡಲ, ಸೊರಬ, ಬಂಗಾರಪೇಟೆ, ಕನಕಪುರ 3, ಹುಕ್ಕೇರಿ, ಅಥಣಿ, ಹಾವೇರಿ, ವಿಜಯಪುರ, ರಾಯಚೂರು, ಮಂಡ್ಯ, ಪಾಂಡವಪುರ, ಚಿಂತಾಮಣಿ, ಚಿಕ್ಕಬಳ್ಳಾಪುರ, ಗೌರಿಬಿದನೂರು ಹಾಗೂ ಕುಣಿಗಲ್‍ನಲ್ಲಿ ತಲಾ 2 ಸೆಂ.ಮೀ ಮಳೆಯಾಗಿದೆ.
ರಾತ್ರಿ ವೇಳೆ ಫಾರ್ಮಾಡಿ ಘಾಟಿ ಬಂದ್
ಚಾರ್ಮಾಡಿ ಘಾಟಿ ಮಾರ್ಗದಲ್ಲಿ (ಎನ್.ಎಚ್–73) ಗುರುವಾರದಿಂದ ರಾತ್ರಿ ವೇಳೆ ವಾಹನ ಸಂಚಾರಕ್ಕೆ ನಿರ್ಬಂಧ ವಿಧಿಸಲಾಗಿದೆ. ಚಾರ್ಮಾಡಿ ಘಾಟಿ ಭಾಗದಲ್ಲಿ ನಿರಂತರವಾಗಿ ಮಳೆಯಾಗುತ್ತಿದೆ. ಮಾರ್ಗದಲ್ಲಿ ಗುಡ್ಡದ ಮಣ್ಣು ಕುಸಿಯುವ ಸಾಧ್ಯತೆ ಇದ್ದು, ಮುಂಜಾಗ್ರತೆಯಾಗಿ ರಾತ್ರಿ 7ರಿಂದ ಬೆಳಿಗ್ಗೆ 7ಗಂಟೆ ವರೆಗೆ ನಿರ್ಬಂಧ ಹೇರಲಾಗಿದೆ ಎಂದು ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್ ತಿಳಿಸಿದ್ದಾರೆ.



