ಡಿವಿಜಿ ಸುದ್ದಿ, ಬೆಂಗಳೂರು: ಪೆಟ್ರೋಲ್, ಡೀಸೆಲ್ ಮೇಲಿನ ಮಾರಾಟ ತೆರಿಗೆಯನ್ನು ಹೆಚ್ಚಿಸಿರುವ ಮುಖ್ಯಮಂತ್ರಿ ಯಡಿಯೂರಪ್ಪ ಅಬಕಾರಿ ಸುಂಕವನ್ನು ಹೆಚ್ಚಿಸಿ ಮದ್ಯ ಪ್ರಿಯರಿಗೆ ಬೆಲೆ ಏರಿಕೆಯ ಶಾಕ್ ನೀಡಿದ್ದಾರೆ.
ಪ್ರಸ್ತುತ ಮದ್ಯದ ಎಲ್ಲಾ 18 ಘೋಷಿತ ಬೆಲೆ ಸ್ಲ್ಯಾಬ್‍ಗಳ ಮೇಲಿನ ಹೆಚ್ಚುವರಿ ಅಬಕಾರಿ ಸುಂಕವನ್ನು ಶೇ.6ರಷ್ಟು ಹೆಚ್ಚಿಸಿದ್ದಾರೆ. ಇದರಿಂದ ಅಬಕಾರಿ ಇಲಾಖೆಯಿಂದ 2019-20ನೇ ಸಾಲಿನಲ್ಲಿ ಒಟ್ಟು 20,950 ಕೋಟಿ ರೂಪಾಯಿ ತೆರಿಗೆ ಸಂಗ್ರಹಣೆ ಗುರಿ ಹೊಂದಲಾಗಿತ್ತು. ಆದರೆ, ಫೆಬ್ರವರಿ ಅಂತ್ಯದವರೆಗೆ 19,701 ಕೋಟಿ ಮಾತ್ರ ಸಂಗ್ರಹವಾಗಿದೆ. ಹೀಗಾಗಿ ಶೇ. 6 ರಷ್ಟು ಸುಂಕ ಹೆಚ್ಚಿಸುವ ಮೂಲಕ 2020-21ನೇ ಆರ್ಥಿಕ ವರ್ಷದಲ್ಲಿ 22,700 ಕೋಟಿ ತೆರಿಗೆ ಸಂಗ್ರಹ ಗುರಿ ಹಾಕಿಕೊಂಡಿದೆ. ಸಮ್ಮಿಶ್ರ ಸರ್ಕಾರ 18 ಘೋಷಿತ ಬೆಲೆ ಸ್ಲಾಬ್‍ಗಳ ಮೇಲಿನ ಹೆಚ್ಚುವರಿ ಅಬಕಾರಿ ಸುಂಕ ದರಗಳನ್ನು ಶೇ.4ರಷ್ಟು ಹೆಚ್ಚಿಸಿತ್ತು.

ಜಿಎಸ್‍ಟಿಯಲ್ಲಿ ಮದ್ಯ, ಪೆಟ್ರೋಲ್, ಡೀಸೆಲ್ ಸೇರ್ಪಡೆಯಾಗಬೇಕು ಎಂದು ಒತ್ತಾಯ ಕೇಳಿ ಬರುತ್ತಿದ್ದರೂ ಸರ್ಕಾರಗಳು ಸೇರ್ಪಡೆಗೊಳಿಸಲು ಹಿಂದೇಟು ಹಾಕುತ್ತಿವೆ. ಈ ಮೂರು ಉತ್ಪನ್ನಗಳು ಜಿಎಸ್‍ಟಿ ಅಡಿ ಬಂದರೆ ರಾಜ್ಯ ಸರ್ಕಾರಗಳಿಗೆ ತೆರಿಗೆ ಹಾಕಲು ಅವಕಾಶ ಇರುವುದಿಲ್ಲ. ರಾಜ್ಯ ಸರ್ಕಾರಗಳು ಪೆಟ್ರೋಲ್, ಡೀಸೆಲ್ ಮಾರಾಟ ತೆರಿಗೆ ಮತ್ತು ಅಬಕಾರಿ ಸುಂಕಗಳಿಂದ ಹೆಚ್ಚು ಬೊಕ್ಕಸ ತುಂಬಿಸಿಕೊಳ್ಳುತ್ತವೆ. ಹೀಗಾಗಿ ಪ್ರತಿ ಬಜೆಟ್ ನಲ್ಲಿ ಅಬಕಾರಿ ಸುಂಕ, ಪೆಟ್ರೋಲ್, ಡೀಸೆಲ್ ಮಾರಾಟ ತೆರಿಗೆ ಹೆಚ್ಚಳ ಮಾಡಲಾಗುತ್ತಿದೆ.



