ಡಿವಿಜಿ ಸುದ್ದಿ, ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಲ್ಲಿ ಗುಡುಗು ಸಹಿತ ಭಾರೀ ಮಳೆ ಸುರಿಯುತ್ತಿದೆ.
ಬೇಸಿಗೆ ಬಿಸಿಲಿನಿಂದ ಬಳಲಿದ್ದ ಸಿಲಿಕಾನ್ ಸಿಟಿ ಭಾರೀ ಮಳೆಯಿಂದ ತಂಪಾಗಿದೆ. ಲಾಕ್‌ಡೌನ್ ನಿಂದ ಬಿಕೋ ಎನ್ನುತ್ತಿರುವ ನಗರದ ರಸ್ತೆಗಳು ನೀರಿನಿಂದ ತುಂಬಿ ತುಳುಕುತ್ತಿವೆ. ಪ್ರತಿ ಸಲ ಮಳೆ ಬಂದಾಗಲೂ ಬೆಂಗಳೂರು ಜನ ಟ್ರಾಫಿಕ್ ಕಿರಿ ಕಿರಿ ಅನುಭವಿಸುತ್ತಿದ್ದರು. ಆದರೆ, ಈಗ ಲಾಕ್ ಡೌನ್ ನಿಂದ ಯಾವುದೇ ಟ್ರಾಫಿಕ್ ಜಾಮ್ ಇಲ್ಲದಂತಾಗಿದೆ.
ಸಂಜೆ 6 ಗಂಟೆ ವೇಳೆಗೆ ಆರಂಭವಾದ ಮಳೆ ಧಾರಾಕಾರವಾಗಿ ಸುರಿಯುತ್ತಿದೆ. ಲಾಕ್ ಡೌನ್ ನಿಂದ ಮನೆಯಲ್ಲಿದ್ದು ಬೇಸತ್ತಿದ್ದ ಜನರಿಗೆ ಸಂತಸ ತಂದಿದೆ. ಬಸವನಗುಡಿ, ಜಯನಗರ, ವಿಜಯನಗರ, ರಾಜಾಜಿನಗರ, ಬನಶಂಕರಿ, ಕೋರಮಂಗಲ ಸೇರಿದಂತೆ ನಗರದ ಪ್ರಮುಖ ಪ್ರದೇಶಗಳಲ್ಲಿ ಮಳೆಯ ಅಬ್ಬರ ಜೋರಾಗಿದೆ.



