(ಹಾಸ್ಯ ದೃಷ್ಟಿಯಿಂದ ಮಾತ್ರ ನೋಡಿರಿ,
ಅನ್ಯಥಾ ಅನರ್ಥ ಭಾವಿಸದೀರಿ)
ಗಂಡಾಂತರಗಳ ಗುಂಡಿಗೆ
ಬಿದ್ದು ಒದ್ದಾಡುವನು ಗಂಡನು
ಹೆಂಡವ ಅತಿ ಕುಡಿಯುವ ಗಂಡಿನ
ಜೀವ ಹಿಂಡುವಳು ಹೆಂಡತಿಯು.
ಮಡದಿ ಆರ್ಭಟದ ಪ್ರಳಯಕೆ
ದಂ ಕಳೆದುಕೊಂಡವನು ಪತಿ
ಮನೆ ಮಡದಿ ಮಕ್ಕಳ ರಂಪಾಟಕೆ
ಮೂಕ ಕಿವುಡನಾಗುವ ಪಶುಪತಿ.
ವರುಷವೆಲ್ಲ ಗಂಡನ
ಹರುಷವೆಲ್ಲ ಕಿತ್ತುಕೊಂಡು
ಪುರುಷೋತ್ತಮರ ಪೂಜಿಸುವ
ಪರಮ ಪತಿವ್ರತೆಯರ ದಿನವು ಬಂತು.
ಭೀಮನ ಅಮಾವಾಸ್ಯೆಯಂದು
ನೇಮ ನಿಷ್ಠೆಯಿಂದ ಪೂಜೆಗೈದು
ಪ್ರೇಮ ಪ್ರೀತಿಯ ಮಾತನಾಡುವ
ಧರ್ಮಪತ್ನಿಯರ ದಿನವು ಬಂತು.
ವರ್ಷಕ್ಕೊಮ್ಮೆ ಆದರದ ಸಂಸ್ಕಾರ
ವರ್ಷಧಾರೆಯಂಗೆ ಪತ್ನಿಯ ಸತ್ಕಾರ
ದಾಂಪತ್ಯ ನ್ಯಾಯಾಲಯದಿ ನಿತ್ಯ ಸಜೆ
ಈ ನೆಪದಲ್ಲಾದರೂ ಪತಿಗಿರಲಿ ಪೂಜೆ.
ಶಿವಮೂರ್ತಿ.ಹೆಚ್. ಕನ್ನಡ ಶಿಕ್ಷಕರು
ಶ್ರೀ ತರಳಬಾಳು ಜಗದ್ಗುರು ರೆಸಿಡೆನ್ಸಿಯಲ್ ಸ್ಕೂಲ್
ಅನುಭವಮಂಟಪ, ದಾವಣಗೆರೆ.
ದೂ.ಸಂ.9740050150.