ಅಮ್ಮನಾಗಿ ಜನ್ಮವ
ನೀಡಿ ಜಗಕ್ಕೆ ತಂದವಳು
ಅಕ್ಕನಾಗಿ ಅಕ್ಕರೆ ಕೊಟ್ಟು
ಆರೈಕೆಯ ಮಾಡಿದವಳು.
ತಂಗಿಯಾಗಿ ತರಲೇ ಮಾಡಿ
ಮಮತೆ ನೀಡಿದವಳು
ಅಜ್ಜಿಯಾಗಿ ಜೀವನ ಮೌಲ್ಯಗಳ
ಒರತೆ ನಿಧಿಯಾದವಳು.
ಅತ್ತೆಯಾಗಿ ಮಗಳ ಬಾಳ
ಸಂಗಾತಿಯಾಗಲು ಧಾರೆರೆದವಳು
ಸೊಸೆಯಾಗಿ ಸ್ನೇಹ ಪ್ರೀತಿಯ
ಜಲಧಾರೆಯ ಸುಧೆಯಾದವಳು.
ಅತ್ತಿಗೆಯಾಗಿ ಹಿರಿಯಕ್ಕನಂತೆ
ಮನೆಗೆ ಬಂದು ಪೊರೆದವಳು
ನಾದಿನಿಯಾಗಿ ಕಿರಿಕ್ತಂಗಿಯಂತೆ
ನಮಗೆ ನಲ್ಮೇಯ ತಂದವಳು.
ದೊಡ್ಡಮ್ಮ ಚಿಕ್ಕಮ್ಮಳಾಗಿ
ಒಲ್ಮೇಯಿಂದ ಸಲುಹಿದವಳು
ಗುರುವಾಗಿ ವಿದ್ಯೆ ಬುದ್ಧಿಯ
ನೀಡಿ ಜೀವನ ಬೆಳಕಾದವಳು.
ಸಹೋದ್ಯೋಗಿಯಾಗಿ ವೃತ್ತಿ
ಸಲಹೆ ಸೂಚನೆಗಳ ಕೊಟ್ಟವಳು
ಗೆಳತಿಯಾಗಿ ಸರಿ ತಪ್ಪುಗಳ
ತಿದ್ದಿ ತೀಡಿ ಜೊತೆಯಾದವಳು.
ಮಡದಿಯಾಗಿ ಮನೆತನದ
ಗೌರವ ಬೆಳಸಲು ಬಂದವಳು
ಮಗಳಾಗಿ ಬಾಳಿನ ಜವಾಬ್ದಾರಿ
ಹೊಣೆಗಾರಿಕೆಯ ತಿಳಿಸಿದವಳು.
ತನ್ನ ತಾನು ಸುಟ್ಟುಕೊಂಡು ತನ್ನವರಿಗೆ
ಬಾಳ ಬೆಳಕ ನೀಡುವ ಜ್ಯೋತಿಯಾದವಳು
ಬಾಳ ಪಯಣದ ಪ್ರತಿ ಹಂತಹಂತದಲ್ಲೂ
ತನ್ನೆಲ್ಲ ಪಾತ್ರವ ನಿರ್ವಹಿಸಿ ಗೆದ್ದವಳು.
–ಶಿವಮೂರ್ತಿ.ಹೆಚ್. ಕನ್ನಡ ಶಿಕ್ಷಕರು
ಶ್ರೀ ತರಳಬಾಳು ಸೆಂಟ್ರಲ್ ಸ್ಕೂಲ್
ಅನುಭವಮಂಟಪ, ದಾವಣಗೆರೆ.
9740050150



