ಡಿವಿಜಿ ಸುದ್ದಿ, ಬೆಂಗಳೂರು: ಶಿವಮೊಗ್ಗ ಜಿಲ್ಲೆಯ ಜೋಗಜಲಪಾತವನ್ನು ಕರ್ನಾಟಕ ವಿದ್ಯುತ್ ನಿಗಮದಿಂದ 120 ಕೋಟಿ ವೆಚ್ಚದಲ್ಲಿ ಅಭಿವೃದ್ಧಿಪಡಿಸಲು ಸಚಿವ ಸಂಪುಟ ಸಭೆ ತೀರ್ಮಾನಿಸಿದೆ.
ಈ ಬಗ್ಗೆ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜೆ.ಸಿ.ಮಾಧುಸ್ವಾಮಿ ಮಾತನಾಡಿ, 120 ಕೋಟಿ ವೆಚ್ಚದಲ್ಲಿ ರೋಪ್ ವೇ, ಉದ್ಯಾನ, ಜಲಕ್ರೀಡೆ, ಕೆಫೆಟೇರಿಯಾ ಸೇರಿದಂತೆ ಹಲವು ಅಭಿವೃದ್ಧಿ ಕೆಲಸಗಳನ್ನು ಕೈಗೆತ್ತಿಕೊಳ್ಳಲಾಗುವುದು ಎಂದು ತಿಳಿಸಿದರು.
ಈ ಹಿಂದೆ ಮೆಸರ್ಸ್ ಬಿಆರ್‌ಎಸ್ ಸಂಸ್ಥೆಗೆ ನೀಡಿದ್ದ ಗುತ್ತಿಗೆಯನ್ನು ರದ್ದುಪಡಿಸಲಾಗಿದೆ. 450 ಕೋಟಿ ವೆಚ್ಚದಲ್ಲಿ ಅಭಿವೃದ್ಧಿಗೆ ಯೋಜನೆ ರೂಪಿಸಲಾಗಿತ್ತು. ಆದರೆ ಅವರು ಕಾಮಗಾರಿ ಕೈಗೆತ್ತಿಕೊಳ್ಳಲು ಮುಂದಾಗಲಿಲ್ಲ ಎಂದು ತಿಳಿಸಿದರು.
ಇನ್ನು ವಿಶ್ವಬ್ಯಾಂಕ್ ನೆರವಿನೊಂದಿಗೆ 20 ಜಿಲ್ಲೆಗಳ ಆಯ್ದ ತಾಲ್ಲೂಕುಗಳಲ್ಲಿ 10 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಜಲಾನಯನ ಪ್ರದೇಶದ ಪುನರುಜ್ಜೀವನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. 600 ಕೋಟಿ ವೆಚ್ಚದ ಈ ಯೋಜನೆಗೆ ರಾಜ್ಯ ಸರ್ಕಾರ 180 ಕೋಟಿ ಮತ್ತು ವಿಶ್ವಬ್ಯಾಂಕ್ 420 ಕೋಟಿ ಭರಿಸಲಿವೆ.
ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಪಾಲಿಟೆಕ್ನಿಕ್ ಮತ್ತು ಎಂಜನಿಯರಿಂಗ್ ಕಾಲೇಜುಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಡಿಜಿಟಲ್ ಕಲಿಕೆಗೆ ಅನುಮೋದನೆ ನೀಡಲಾಗಿದೆ. 430 ಪ್ರಥಮ ದರ್ಜೆ ಕಾಲೇಜುಗಳು, 87 ಪಾಲಿಟೆಕ್ನಿಕ್ ಮತ್ತು 14 ಸರ್ಕಾರಿ ಎಂಜಿನಿಯರಿಂಗ್ ಕಾಲೇಜುಗಳಿದ್ದು, ಇದಕ್ಕಾಗಿ 35 ಕೋಟಿ ಅನುದಾನ ನೀಡಲಾಗಿದೆ ಎಂದರು.
ಸೊರಬ ಪಟ್ಟಣ ಪಂಚಾಯಿತಿ ಪುರಸಭೆಯಾಗಿ, ಯಾದಗಿರಿ ಜಿಲ್ಲೆ ದೇವದುರ್ಗಾ ತಾಲ್ಲೂಕು ಅರಕೇರಾ ಗ್ರಾಮ ಪಂಚಾಯಿತಿ ತಾಲ್ಲೂಕ್ ಆಗಿ ಹಾಗೂ ಮುಧೋಳ ತಾಲ್ಲೂಕು ಲೋಕಾಪುರ ಗ್ರಾಮ ಪಟ್ಟಣ ಪಂಚಾಯಿತಿಯಾಗಿ ಮೇಲ್ದರ್ಜೆಗೆ ಎಂದು ತಿಳಿಸಿದರು.
ಬಿಬಿಎಂಪಿ ವಾರ್ಡ್‌ಗಳ ಸಂಖ್ಯೆಯನ್ನು 198 ರಿಂದ 225 ಕ್ಕೆ ಹೆಚ್ಚಿಸಲು ಚರ್ಚೆಲಾಗುತ್ತಿದ್ದು, ಬಿಬಿಎಂಪಿ ಕ್ಷೇತ್ರ ಪುನರ್‌ವಿಂಗಡಣೆ ಮಾಡಬೇಕಾಗಿರುವುದರಿಂದ ಚುನಾವಣೆ ಮುಂದೂಡಲು ಕೋರಿಕೆ ಸಲ್ಲಿಸಲು ತೀರ್ಮಾನ ಕೈಗೊಳ್ಳಲಾಗಿದೆ ಎಂದು ಹೇಳಿದರು.



