ನವದೆಹಲಿ: ಭಾರತದಲ್ಲಿ ದಿನದಿಂದ ದಿನಕ್ಕೆ ಕೊರೊನಾ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆ ಈ ಸಲದ ಐಪಿಎಲ್ ಕ್ರಿಕೆಟ್ ಟೂರ್ನಿಯನ್ನು ಯುಎಇಯಲ್ಲಿ ಆಯೋಜಿಸುವುದು ಸೂಕ್ತ ಎಂಬ ಅಭಿಪ್ರಾಯ ವ್ಯಕ್ತವಾಗಿದೆ.
ಆನ್ಲೈನ್ ಮೂಲಕ ನಡೆದ ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ ಆನ್ ಲೈನ್ ಮೂಲಕ ನಡೆಸಿದ ಸಭೆಯಲ್ಲಿ ಈ ಅಭಿಪ್ರಾಯ ವ್ಯಕ್ತವಾಯಿತು. ಅಕ್ಟೋಬರ್ 18 ರಿಂದ ನವೆಂಬರ್ 15ರವರೆಗೆ ಆಸ್ಟ್ರೇಲಿಯಾದಲ್ಲಿ ನಿಗದಿಯಾಗಿರುವ ಟ್ವೆಂಟಿ–20 ವಿಶ್ವಕಪ್ ಕ್ರಿಕೆಟ್ ಟೂರ್ನಿಯನ್ನು ಮುಂದೂಡುವ ಸಾಧ್ಯತೆ ಇದೆ. ಹೀಗಾಗಿ ಈ ಅವಧಿಯಲ್ಲಿ ಐಪಿಎಲ್ ಟೂರ್ನಿ ಆಯೋಜಿಸಲು ಬಿಸಿಸಿಐ ಸಭೆಯಲ್ಲಿ ಚರ್ಚಿಸಲಾಯಿತು.
ಯುಎಇಯಲ್ಲಿ ಕೊರೊನಾ ಪ್ರಕರಣಗಳು ಕಡಿಮೆ ಇವೆ. ಐಪಿಎಲ್ ಹಾಗೂ ಕ್ರಿಕೆಟಿಗರ ತರಬೇತಿ ಶಿಬಿರಗಳನ್ನು ಅಲ್ಲಿಯೇ ಆಯೋಜಿಸುವುದು ಸೂಕ್ತ ಎಂದು ಹಲವರುಸಲಹೆ ನೀಡಿದ್ದಾರೆ. ಈ ಕುರಿತು ಐಪಿಎಲ್ ಆಡಳಿತ ಮಂಡಳಿಯು ಅಂತಿಮ ತೀರ್ಮಾನ ಕೈಗೊಳ್ಳಲಿದೆ.
ಒಂದು ವೇಳೆ ಯುಎಇನಲ್ಲಿ ಐಪಿಎಲ್ ನಡೆಯುವುದು ಖಚಿತವಾದರೆ, ಟೂರ್ನಿಗಿಂತ ಮೊದಲು ಭಾರತೀಯ ಕ್ರಿಕೆಟಿಗರು ಅಲ್ಲಿ ತರಬೇತಿ ಪಡೆಯಬಹುದು. ದುಬೈನಲ್ಲಿ ಉತ್ತಮ ಮೂಲಸೌಕರ್ಯಗಳಿವೆ ಎಂದು ಬಿಸಿಸಿಐ ಅಧಿಕಾರಿಗಳು ತಿಳಿಸಿದ್ದಾರೆ.
ಶ್ರೀಲಂಕಾ ಕೂಡ ಐಪಿಎಲ್ ಆಯೋಜಿಸಲು ಆಸಕ್ತಿ ತೋರಿತ್ತು. 2014ರಲ್ಲಿ ಭಾರತದಲ್ಲಿ ಸಾರ್ವತ್ರಿಕ ಚುನಾವಣೆಗಳು ನಡೆದ ಸಂದರ್ಭದಲ್ಲಿ ಯುಎಇನಲ್ಲಿ ಐಪಿಎಲ್ನ ಕೆಲವು ಪಂದ್ಯಗಳು ಆಯೋಜನೆಗೊಂಡಿದ್ದವು. ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಅವರ ಅಧಿಕಾರಾವಧಿಯು ಇದೇ 27ಕ್ಕೆ ಕೊನೆಗೊಳ್ಳಲಿದೆ. ಗಂಗೂಲಿ, ಕಾರ್ಯದರ್ಶಿ ಜಯ್ ಶಾ ಹಾಗೂ ಜಂಟಿ ಕಾರ್ಯದರ್ಶಿ ಜಯೇಶ್ ಜಾರ್ಜ್ ಅವರನ್ನು ಈ ಹುದ್ದೆಗಳಲ್ಲಿ ಮುಂದುವರಿಸುವಂತೆ ಬಿಸಿಸಿಐ, ಸುಪ್ರೀಂಕೋರ್ಟ್ಗೆ ಮನವಿ ಮಾಡಿದೆ.