ಡಿವಿಜಿಸುದ್ದಿ. ಕಾಂ, ದಾವಣಗೆರೆ: ಸಮರ್ಪಕವಾಗಿ ವೇತನ ನೀಡದೆ ಕೆಲಸದಿಂದ ತೆಗೆದು ಹಾಕಲಾಗಿದೆ ಎಂದು ಜಿಲ್ಲಾ ಆಸ್ಪತ್ರೆ ಡಿ ಗ್ರೂಪ್ ನೌಕರರು ಮಾಡುತ್ತಿರುವ ಆರೋಪದಲ್ಲಿ ಯಾವುದೇ ಸತ್ಯಾಂಶವಿಲ್ಲ ನಾವು ಕೆಲಸಗಾರರಿಗೆ ಯಾವುದೇ ರೀತಿಯ ತೊಂದರೆ ನೀಡಿಲ್ಲ ಎಂದು ಪೂಜ್ಯಾಯ ಸೆಕ್ಯೂರಿಟಿ ಸರ್ವಿಸ್ ನ ವ್ಯವಸ್ಥಾಪಕ ಎನ್.ಮಂಜುನಾಥ್ ಸ್ಪಷ್ಟಪಡಿಸಿದರು.
ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಸರ್ಕಾರದ ಆದೇಶದನ್ವಯ ಜಿಲ್ಲಾಧಿಕಾರಿಗಳ ಮಾರ್ಗದರ್ಶನದಂತೆ ಶೇ. 25 ರಷ್ಟು ಹೊರಗುತ್ತಿಗೆ ನೌಕರರನ್ನು ಕಡಿತಗೊಳಿಸಲಾಗಿದೆ. ಜಿಲ್ಲಾಸ್ಪತ್ರೆಯ ಅಧೀಕ್ಷರು ಹಾಗೂ ಎಲ್ಲಾ ಅಧಿಕಾರಿ ವೃಂದದ ಸಮಕ್ಷಮದಲ್ಲಿ ಸಭೆ ನಡೆಸಿ ಈ ತೀರ್ಮಾನ ತಗೆದುಕೊಳ್ಳಲಾಗಿದೆ.
ಸಮರ್ಪಕವಾಗಿ ಕೆಲಸ ನಿರ್ವಹಿಸದ, ಮದ್ಯಪಾನ ಮಾಡಿ ನೌಕರಿಗೆ ಬರುವ, ದೈಹಿಕ ಸಾಮರ್ಥ್ಯವಿಲ್ಲದ, ಅನಾರೋಗ್ಯದಿಂದ ಬಳಲುತ್ತಿರುವ, ರೋಗಿಗಳ ಬಳಿ ಒತ್ತಾಯ ಪೂರ್ವಕವಾಗಿ ಹಣ ಪಡೆಯುವ, ಒಂದೇ ಕುಟುಂಬದ ಇಬ್ಬರು ಸದಸ್ಯರಿರುವವರನ್ನು ಗುರುತಿಸಿ ಕೆಲಸದಿಂದ ತೆಗೆಯಲಾಗಿದೆ ಎಂದರು.
ಸರ್ಕಾರದಿಂದ ನಮಗೆ ವೇತನ ವಿಳಂಬವಾದರು ಸಹ ಮೂರು ತಿಂಗಳ ವೇತನವನ್ನು ಸಂಸ್ಥೆ ಭರಿಸಿದೆ. ಆದರೂ ಸಹ ವಜಾಗೊಂಡಿರುವ ನೌಕರರು ಗುಂಪುಗಾರಿಕೆ ಮಾಡುತ್ತಾ, ಆಸ್ಪತ್ರೆಯ ಸ್ವಚ್ಚತೆಗೆ ಅಡ್ಡಿಪಡಿಸುತ್ತಾ, ಪದೇ ಪದೇ ಧರಣಿ ಮಾಡಿ ಸಾರ್ವಜನಿಕರಿಗೆ, ರೋಗಿಗಳಿಗೆ ತೊಂದರೆ ಮಾಡುತ್ತಿದ್ದಾರೆ. ಇದನ್ನು ಪ್ರಶ್ನಿಸಿದರೆ ಅವಾಚ್ಯವಾಗಿ ನಿಂದಿಸುತ್ತಿದ್ದಾರೆ. ಈ ಆರೋಪದಲ್ಲಿ ಯಾವುದೇ ಸತ್ಯಾಂಶವಿಲ್ಲ ಎಂದು ಸ್ಪಷ್ಟಪಡಿಸಿದರು.
ಸಂಸ್ಥೆಯಿಂದ ದಾವಣಗೆರೆ, ಶಿವಮೊಗ್ಗ, ಚಿತ್ರದುರ್ಗ ಹಾಗೂ ಹಾವೇರಿ ಜಿಲ್ಲೆಗಳಲ್ಲೂ ಸಹ ಗುತ್ತಿಗೆ ಆಧಾರದ ಮೇಲೆ ಕೆಲಸಗಾರರಿದ್ದಾರೆ. ವಿವಿಧ ಇಲಾಖೆಗಳಿಗೂ ನಮ್ಮ ಸಂಸ್ಥೆಯ ನೌಕರರು ಕೆಲಸ ಮಾಡುತ್ತಿದ್ದಾರೆ. ಆದರೆ ಜಿಲ್ಲಾಸ್ಪತ್ರೆಯಲ್ಲಿ ಮಾತ್ರ ಕೆಲಸದಿಂದ ವಜಾಗೊಂಡವರು ಇಲ್ಲಸಲ್ಲದ ಆರೋಪ ಮಾಡುತ್ತಿದ್ದಾರೆ ಎಂದರು. ಈ ಸಂದರ್ಭದಲ್ಲಿ ಎನ್.ರಾಜಕುಮಾರ್, ಪಿ.ಲೋಹಿತ್, ಎನ್.ಚಂದ್ರು, ಎನ್.ಮಂಜುನಾಥ್, ಬಿ.ನವೀನ್ ಮತ್ತಿತರರಿದ್ದರು.



