ಡಿವಿಜಿ ಸುದ್ದಿ, ಹೊನ್ನಾಳಿ: ಕೋಣ ಬಿಟ್ಟುಕೊಡಿ ಅಂತಾ ರಾಜ್ಯದ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹೇಳಿದ್ರೂ, ನಾವು ಕೋಣ ಬಿಟ್ಟು ಕೊಡುತ್ತಿರಲಿಲ್ಲ. ನಮ್ಮ ಊರಿನ ಕೋಣ ಬೇರೆಯವರು ಎಳೆದುಕೊಂಡು ಹೋದ್ರೆ ಸುಮ್ಮನಿರೋದಕ್ಕೆ ಆಗುತ್ತಾ… ಇದೊಂದು ಇಂಡಿಯಾ ಪಾಕಿಸ್ತಾನ ಮ್ಯಾಚ್ ರೀತಿ ಆಗಿತ್ತು. ಕೊನೆಗೆ ಇಂಡಿಯಾನೇ ಗೆದ್ದಿದೆ ಎಂದು ಹೊನ್ನಾಳಿ ಶಾಸಕ ರೇಣುಕಾಚಾರ್ಯ ಹೇಳಿದ್ರು.
ಹೊನ್ನಾಳಿ ತಾಲ್ಲೂಕಿನ ಬೇಲಿಮಲ್ಲೂರು ಹಾಗು ಶಿವಮೊಗ್ಗ ತಾಲ್ಲೂಕಿನ ಹಾರನಹಳ್ಳಿ ಗ್ರಾಮದ ನಡುವೆ ಕೋಣನ ವಾರುಸುದಾರಿಕೆ ಭಾರೀ ಜಿದ್ದಾಜಿದ್ದಿಗೆ ಕೊನೆಗೆ ತೆರೆ ಬಿದ್ದು, ಹೊನ್ನಾಳಿಯ ಬೇಲಿಮಲ್ಲೂರು ಗ್ರಾಮಕ್ಕೆ ಸೇರಿದ್ದು ಎಂದು ತೀರ್ಮಾನಕ್ಕೆ ಬರಲಾಗಿತ್ತು. ಇವತ್ತು, ಶಿವಮೊಗ್ಗದಿಂದ ಹೊನ್ನಾಳಿ ತಾಲ್ಲೂಕಿಗೆ ಕೋಣ ತಂದು ಹೊನ್ನಾಳಿ ಮುಖ್ಯ ರಸ್ತೆಯಲ್ಲಿ ಭರ್ಜರಿ ಮೆರವಣಿಗೆ ಮಾಡಲಾಯಿತು. ಈ ಸಂದರ್ಭದಲ್ಲಿ ಬಹಿರಂಗ ಸಭೆಯಲ್ಲಿ ಶಾಸಕ ರೇಣುಕಾಚಾರ್ಯ ಮಾತನಾಡಿದರು.
ಇದು ಹೊನ್ನಾಳಿ ತಾಲೂಕಿನ ಬೇಲಿಮಲ್ಲೂರು ಕೋಣ. ಯಾರೇ ಏನೇ ಹೇಳಿದ್ರೂ, ನಾನು ಕೋಣ ಬಿಟ್ಟುಕೊಡಲ್ಲ ಅಂತಾ ಹೇಳಿದ್ದೆ. ಶಿವಮೊಗ್ಗ ಗ್ರಾಮಾಂತರ ಕ್ಷೇತ್ರದ ಶಾಸಕ ಅಶೋಕನಾಯ್ಕ ಅಲ್ಲಾ, ಸ್ವತಃ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರೇ ಹೇಳಿದ್ದರೂ, ನಾನು ನಮ್ಮೂರಿನ ಕೋಣ ಬಿಟ್ಟುಕೊಡುತ್ತಿರಲಿಲ್ಲ.
8 ವರ್ಷದ ಬೇಲಿಮಲ್ಲೂರು ಕೋಣ ತಾಯಿ ಕೂಡ ಇದೆ. ಇದರ ಡಿಎನ್ಎ ಪರೀಕ್ಷೆಗೆ ಸಹ ನಾವು ಒಪ್ಪಿದ್ದೇವೆ. ಈ ಎರಡೂ ಊರಿನ ನಡುವಿನ ಕೋಣಕ್ಕಾಗಿ ಪ್ರತಿಷ್ಠೆ ಪ್ರಶ್ನೆಯಾಗಿತ್ತು. ಇಂಡಿಯಾ-ಪಾಕಿಸ್ತಾನದ ಮ್ಯಾಚ್ ರೀತಿಯಾಗಿತ್ತು. ಕೊನೆಗೆ ಇಂಡಿಯಾ (ಹೊನ್ನಾಳಿ) ಗೆದ್ದಿದೆ ಎಂದರು.



