ಡಿವಿಜಿ ಸುದ್ದಿ, ಹರಿಹರ: ತಿಂಗಳಿಗೊಮ್ಮೆ ಸರಿಯಾಗಿ ವೇತನ ವಿತರಿಸುವಂತೆ ಆಗ್ರಹಿಸಿ ರಾಜ್ಯ ಆರೋಗ್ಯ ಸಹಾಯಕರ ಮತ್ತು ಮೇಲ್ವಿಚಾರಕರ ಸಂಘದಿಂದ ತಹಶೀಲ್ದಾರ್ ಕೆ.ಬಿ.ರಾಮಚಂದ್ರಪ್ಪರಿಗೆ ಮನವಿಸ ಸಲ್ಲಿಸಲಾಯಿತು.
ನಂತರ ಮಾತನಾಡಿದ ಸಂಘದ ತಾಲೂಕು ಅಧ್ಯಕ್ಷ ಎಂ.ಉಮಣ್ಣ, ಆರೋಗ್ಯ ಸಹಾಯಕ ವೃಂದದವರಿಗೆ ರಾಜ್ಯದಲ್ಲಿ 3 ರಿಂದ 6 ತಿಂಗಳಿಗೊಮ್ಮೆ ವೇತನ ನೀಡಲಾಗುತ್ತಿದೆ. ಇದರಿಂದ ಜೀವನ ನಿರ್ವಹಣೆ ಮಾಡುವುದು ಕಷ್ಟಕರವಾಗಿದೆ.
ತಿಂಗಳಿಗೊಮ್ಮೆ ವೇತನ ನೀಡಲು ಈ ಹಿಂದೆ ಆರೋಗ್ಯ ಇಲಾಖೆ ನಿರ್ದೇಶಕರು, ಸರಕಾರದ ಪ್ರಧಾನ ಕಾರ್ಯದರ್ಶಿ ಸೇರಿದಂತೆ ಸಂಬಂಧಿತ ರಾಜ್ಯ ಮಟ್ಟದ ಅಧಿಕಾರಿಗಳಿಗೆ ಮನವಿ ನೀಡಲಾಗಿದೆ. ಆದರೂ ಕೂಡ ಆರೋಗ್ಯ ಸಹಾಯಕರು ವೇತನಕ್ಕಾಗಿ ಪರದಾಡುವುದು ತಪ್ಪಿಲ್ಲ.
ಸಾರ್ವಜನಿಕರ ಆರೋಗ್ಯ ಕಾಪಾಡುವ ಹೊಣೆ ಹೊತ್ತ ಆರೋಗ್ಯ ಸಹಾಯಕರ ಆರೋಗ್ಯವೇ ಹದಗೆಟ್ಟಿದೆ. ಸಾಲ, ಸೂಲ ಮಾಡಿ ಕುಟುಂಬ ನಿರ್ವಹಣೆ ಮಾಡಬೇಕಿದೆ. ಮಕ್ಕಳ ಶಾಲಾ ಶುಲ್ಕ ಪಾವತಿ, ದಿನಸಿ ಅಂಗಡಿ ಖರೀದಿ ಕಷ್ಟಕರವಾಗಿದೆ.ಸರಕಾರದ ಕಣ್ಣು ತೆರೆಸಲು ಸಂಘದ ಕೇಂದ್ರ ಸಭೆಯ ನಿರ್ಣಯದಂತೆ ಈ ತಿಂಗಳಿಂದ ರಾಷ್ಟ್ರೀಯ ಕಾರ್ಯಕ್ರಮಗಳ ವರದಿ ಸಲ್ಲಿಸುವುದನ್ನು ಸ್ಥಗಿತಗೊಳಿಸುತ್ತಿದ್ದೇವೆ. ಡಿಸೆಂಬರ್ ತಿಂಗಳಿಂದ ಎಲ್ಲಾ ಕಾರ್ಯಕ್ರಮಗಳ ವರದಿ ನೀಡುವುದನ್ನು ಸ್ಥಗಿತಗೊಳಿಸಲಾಗುವುದೆಂದು ಎಚ್ಚರಿಕೆ ನೀಡಿದರು.
ಮನವಿ ಸ್ವೀಕರಿಸಿದ ತಹಶೀಲ್ದಾರ್ ಬೇಡಿಕೆಗಳನ್ನು ಹಿರಿಯ ಅಧಿಕಾರಿಗಳ ಗಮನಕ್ಕೆ ತರುವುದಾಗಿ ಹೇಳಿದರು. ಆರೋಗ್ಯ ಸಹಾಯಕರ ಸಂಘದ ಪದಾಧಿಕಾರಿಗಳಾದ ಎಂ.ಬಿ.ಮಂಜುನಾಥ್, ಗೋವಿಂದಪ್ಪ, ಆದರ್ಶ, ಕಿರಣ್, ವಿಜಯ ವಿಠ್ಠಲ, ಸಾವಿತ್ರಮ್ಮ, ಕಾರ್ಲಿನಾ, ಸುಧಾ, ಕೋಕಿಲಾ ವಾಣಿ, ವಿಮಲಶೀಲ, ಪೂಜಾ, ರೇಖಾ, ಪರಶುರಾಮ, ಮಹೇಶ್ ಇತರರಿದ್ದರು.