ಅನೇಕ ಕಾಯಿಲೆಗಳಿಗೆ ನೆಲ್ಲಿಕಾಯಿ ರಾಮಬಾಣ. ಹಿರಿಯರು ಅನೇಕ ಔಷಧಿಗಳಲ್ಲಿ ನೆಲ್ಲಿಕಾಯಿಗಳನ್ನು ಬಳಸುತ್ತಿದ್ದರು. ಇದರಲ್ಲಿರುವ ವಿಟಮಿನ್ ಸಿ ಅಂಶ ಔಷಧಿ ರೂಪದಲ್ಲಿ ಕಾರ್ಯ ನಿರ್ವಹಿಸುತ್ತದೆ. ಹವಾಮಾನ ಬದಲಾವಣೆಯಿಂದ ಕಂಡು ಬರುವ ಹಾರ್ಮೋನ್ನಲ್ಲಿನ ವ್ಯತ್ಯಾಸವನ್ನು ಸರಿದೂಗಿಸಲು ಹಾಗೂ ಶೀತ ಅಥವಾ ಕೆಮ್ಮ ದೂರ ಮಾಡಲು ನೆಲ್ಲಿಕಾಯಿ ಸೇವನೆ ಉತ್ತಮ.
ಸಾಮಾನ್ಯವಾಗಿ ಅನೇಕ ಹಣ್ಣುಗಳಲ್ಲಿ ವಿಟಮಿನ್ ಸಿ ಕಂಡುಬರುತ್ತದೆ. ಆದರೆ ನೆಲ್ಲಿಕಾಯಿಯಲ್ಲಿ ಕಿತ್ತಳೆ ಹಣ್ಣಿಗಿಂತ ಶೇ.20 ರಷ್ಟು ಹೆಚ್ಚಿನ ವಿಟಮಿನ್ ಪೋಷಕಾಂಶ ಇರುತ್ತದೆ. ವಿಟಮಿನ್ ಸಿ ಎಂಬುದು ಆ್ಯಂಟಿ-ಆಕ್ಸಿಡೆಂಟ್ಗಳ ಒಂದು ವಿಧವಾಗಿದ್ದು, ಇದು ಚರ್ಮದ ಮೇಲಿನ ಫ್ರಿ ರೆಡಿಕಲ್ ಸಮಸ್ಯೆಯಿಂದ ರಕ್ಷಿಸುತ್ತದೆ. ಚರ್ಮದಲ್ಲಿ ಕೊಲಜನ್ ಉತ್ಪಾದನೆಯನ್ನು ಹೆಚ್ಚಿಸಿ, ತ್ವಚೆಯ ಸುಕ್ಕುಗಟ್ಟುವಿಕೆಯನ್ನು ತಡೆಯುತ್ತದೆ. ಹಾಗೆಯೇ ಇಮ್ಯುನಿಟಿಯನ್ನು ಬಲಪಡಿಸಿ ರಕ್ತವನ್ನು ಸ್ವಚ್ಛಗೊಳಿಸುವ ಕಾರ್ಯ ಮಾಡುತ್ತದೆ.

ಮಲಬದ್ಧತೆ ಮತ್ತು ಮಧುಮೇಹ ಮುಂತಾದ ಕಾಯಿಲೆಗಳಿಗೂ ನೆಲ್ಲಿಕಾಯಿ ಉತ್ತಮ. ನೆಲ್ಲಿಕಾಯಿಯನ್ನು ತಿನ್ನುವುದರಿಂದ ನಿಮ್ಮ ದೇಹದ ಕೆಟ್ಟ ಕೊಲಸ್ಟ್ರಾಲ್ ಮಟ್ಟವನ್ನು ನಿಯಂತ್ರಿಸಬಹುದು. ಅಷ್ಟೇ ಅಲ್ಲದೆ ಚರ್ಮದ ಸಮಸ್ಯೆ, ಕೂದಲಿಗೂ ನೆಲ್ಲಿಕಾಯಿ ಸೇವನೆ ತುಂಬಾ ಪ್ರಯೋಜನಕಾರಿ. ಇದರಲ್ಲಿ ವಿಟಮಿನ್ ಸಿ ಹೆಚ್ಚಾಗಿರುವುದರಿಂದ ತ್ವಚೆ ಸಂಬಂಧಿ ಕಾಯಿಲೆಗಳು ದೂರವಾಗುತ್ತದೆ.
ನೆಲ್ಲಿಕಾಯಿ ಕಹಿಯಾಗಿರುವುದರಿಂದ ತಿನ್ನುವುದು ತುಸು ಕಷ್ಟಕರ ಎನಿಸಬಹುದು. ಹೀಗಾಗಿ ಆಹಾರ ರೂಪದಲ್ಲಿ ಕುದಿಸಿ ಅಥವಾ ಉಪ್ಪಿನಕಾಯಿ ಹಾಕುವ ಮೂಲಕ ಸೇವಿಸಬಹುದು. ಇದರಿಂದ ಕೂಡ ನೆಲ್ಲಿಕಾಯಿಯಿಂದ ದೇಹಕ್ಕೆ ಬೇಕಾದ ಉತ್ತಮ ಪೋಷಕಾಂಶಗಳನ್ನು ಪಡೆಯಬಹುದು. ಅಲ್ಲದೆ ಜೇನಿನೊಂದಿಗೆ ಸೇರಿಸಿ ತಿನ್ನಬಹುದು. ಅದರಲ್ಲೂ ಖಾಲಿ ಹೊಟ್ಟೆಯಲ್ಲಿ ನೆಲ್ಲಿಕಾಯಿ ತಿನ್ನುವುದು ಆರೋಗ್ಯಕ್ಕೆ ಉತ್ತಮ.

ನೆಲ್ಲಿಕಾಯಿ ರಸವನ್ನು ಕುಡಿಯುವುದರಿಂದ ದೇಹ ತೂಕವನ್ನು ಕಡಿಮೆ ಮಾಡಿಕೊಳ್ಳಬಹುದು. ದೇಹದಲ್ಲಿರುವ ಕೆಟ್ಟ ಕೊಲೆಸ್ಟ್ರಾಲ್ ಅನ್ನು ನೆಲ್ಲಿಕಾಯಿ ರಸ ಸೇವಿಸುವುದರಿಂದ ನಿಯಂತ್ರಿಸಬಹುದು. ಇದರಿಂದ ದೇಹ ತೂಕ ನಿಯಂತ್ರಣಕ್ಕೆ ಬರಲಿದೆ. ಅಷ್ಟೇ ಅಲ್ಲದೆ ಈ ಜ್ಯೂಸ್ ದಿನನಿತ್ಯ ಕುಡಿದರೆ ಮಧುಮೇಹದ ಸಮಸ್ಯೆಯನ್ನು ತೊಡೆದುಹಾಕಬಹುದು. ಸಾಮಾನ್ಯವಾಗಿ ಜ್ಯೂಸ್ ಮಾಡುವಂತೆ, ನೆಲ್ಲಿಕಾಯಿ ಬೀಜವನ್ನು ಹೊರತುಪಡಿಸಿ ಇದರ ತುಂಡುಗಳನ್ನು ನೀರಿನೊಂದಿಗೆ ಮಿಕ್ಸಿಯಲ್ಲಿ ಹಾಕಿ ರಸ ತಯಾರಿಸಿಕೊಳ್ಳಬಹುದು.
ಹಾಗೆಯೇ ಚರ್ಮದ ಮೇಲಿಕ ಕಪ್ಪು ಕಲೆಗಳನ್ನು ತೆಗೆದುಹಾಕಲು ನೆಲ್ಲಿಕಾಯಿ ರಸವನ್ನು ಅನ್ವಯಿಸಬಹುದು. ಮುಖದ ಮೇಲೆ ನೆಲ್ಲಿಕಾಯಿ ರಸವನ್ನು ಹಚ್ಚುವುದರಿಂದ ಚರ್ಮದ ರಂಧ್ರಗಳನ್ನು ಮುಚ್ಚುವ ಮೆಲನಿನ್ಗೆ ಸಹಾಯ ಮಾಡುತ್ತದೆ. ಹೀಗಾಗಿ ಬೇಸಿಗೆ ಬೇಗೆಯನ್ನು ನೀಗಿಸಲು ನೆಲ್ಲಿಕಾಯಿ ಜ್ಯೂಸ್ ಅನ್ನು ಕುಡಿಯಿರಿ. ಇದರಿಂದ ದಾಹ ತೀರುವುದಲ್ಲದೆ, ಆರೋಗ್ಯಕ್ಕೂ ಅನೇಕ ಪ್ರಯೋಜನಗಳು ಲಭಿಸುತ್ತದೆ.




