ಡಿವಿಜಿ ಸುದ್ದಿ, ರಾಮನಗರ: ನಾನು ಯಾರ ಋಣದ ಸಿಎಂ ಆಗಿರಲಿಲ್ಲ. ಅವರೇ ನನ್ನ ಮನೆ ಬಾಗಿಲಿಗೆ ಬಂದು ನೀವೇ ಸಿಎಂ ಆಗಿ ಅಂತ ಕೇಳಿಕೊಂಡರು ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಯಾರಿಂದ ಅಧಿಕಾರ ಕಳೆದುಕೊಂಡೆ ಅಂತ ನನಗೆ ಗೊತ್ತು. ಕೆಲವರು ಕುಮಾರಸ್ವಾಮಿ ಅವರನ್ನ ಉಳಿಸಿದ್ದೇ ನಾವು ಎಂದು ಪ್ರಚಾರ ಪಡೆದುಕೊಂಡಿದ್ದಾರೆ ಅಂತಾನು ಗೊತ್ತು. ಇದೀಗ ನಮ್ಮ ಪಕ್ಷ ಮುಗಿಸುತ್ತೇವೆ ಎಂದು ಕೆಲವರು ಹೊರಟಿದ್ದಾರೆ ಎಂದು ಜಿಲ್ಲಾ ಕಾಂಗ್ರೆಸ್ ನಾಯಕರ ಹೆಸರು ಹೇಳದೆ ಕುಮಾರಸ್ವಾಮಿ ವಾಗ್ದಾಳಿ ನಡೆಸಿದರು.
ನನ್ನದು ಒಂದು ಸಣ್ಣ ಪಕ್ಷ ಇದೆ, ರೈತರ ಪಕ್ಷ. ಈ ಪಕ್ಷವನ್ನ ದಿವಾಳಿ ಮಾಡಿ ಅಧಿಕಾರ ಕೊಡಲು ಓಡಾಡಲ್ಲ. ರಾಜ್ಯದಲ್ಲಿ ಯಾವ ಮೈತ್ರಿಯೂ ಇಲ್ಲ. ರಾಜ್ಯಸಭೆ ಚುನಾವಣೆ ಬಗ್ಗೆ ಯಾವುದೇ ಪಕ್ಷದಿಂದ ಯಾವುದೇ ನಿರ್ಧಾರ ಮಾಡಿಲ್ಲ. ದೇವೇಗೌಡರು ಸಹ ಯಾವುದೇ ತೀರ್ಮಾನ ಮಾಡಿಲ್ಲ. ದೇವೇಗೌಡರು ಜನರ ಮಧ್ಯೆ ಹೋಗಿ ಚರ್ಚೆ ಮಾಡಿ ತೀರ್ಮಾನ ಮಾಡುತ್ತಾರೆ. ಅವರು ಯಾವತ್ತೂ ಹಿಂಬಾಗಿಲಿನ ರಾಜಕಾರಣ ಮಾಡಿಲ್ಲ. ಕಾಂಗ್ರೆಸ್ ಪಕ್ಷದ ಜೊತೆಗೆ ಯಾವುದೇ ಮಾತುಕತೆ ನಡೆದಿಲ್ಲ ಎಂದು ಹೆಚ್‍ಡಿಕೆ ಸ್ಪಷ್ಟಪಡಿಸಿದರು.



