ಡಿವಿಜಿ ಸುದ್ದಿ, ಹರಪನಹಳ್ಳಿ: ಅತಿವೃಷ್ಠಿಯಿಂದ ಹಾನಿಗೊಳಗಾದ ಎಲ್ಲಾ ಬೆಳೆಗಳಿಗೂ ವೈಜ್ಞಾನಿಕ ಪರಿಹಾರ ಮತ್ತು ಹದಗೆಟ್ಟ ರಸ್ತೆ ದುರಸ್ತಿ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಒತ್ತಾಯಿಸಿ ಅಖಿಲ ಭಾರತ ಕಿಸಾನ್ ಸಭಾ ವತಿಯಿಂದ ತಾಲೂಕಿನ ಸತ್ತೂರು ಗ್ರಾಮದಲ್ಲಿ ಸೋಮವಾರ ರಸ್ತೆ ಅಡ್ಡಗಟ್ಟಿ ಪ್ರತಿಭಟನೆ ನಡೆಸಿದರು.
ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದ ರೈತರ ವಿವಿಧ ಬೆಳೆಗಳು ಸಂಪೂರ್ಣನಾಶ ಹೋಗಿವೆ. ತ್ವರಿತವಾಗಿ ಕೃಷಿ ಮತ್ತು ಕಂದಾಯ ಇಲಾಖೆ ಅಧಿಕಾರಿಗಳು ಸಮೀಕ್ಷೆ ನಡೆಸಿ ಪರಿಹಾರ ವಿತರಿಸಬೇಕು. ಮುಕ್ತವಾಗಿ ಆಮದು ಮಾಡಿಕೊಳ್ಳುವ ಉದ್ದೇಶ ಹೊಂದಿರುವ ಆರ್‌ಸಿಇಪಿ ಒಪ್ಪಂದಕ್ಕೆ ಯಾವುದೇ ಕಾರಣಕ್ಕೂ ಕೇಂದ್ರ ಸರ್ಕಾರ ಸಹಿ ಹಾಕಬಾರದು.
ತಾಲೂಕಿನ ಸತ್ತೂರು ಕ್ರಾಸ್‌ನಿಂದ ಚೌಡಾಪುರ ಮಾರ್ಗವಾಗಿ ಸತ್ತೂರು ಗ್ರಾಮದಲ್ಲಿ ಹಾದು ಹೋಗಿರುವ ಕಂಚಿಕೇರಿ-ದಾವಣಗೆರೆ ರಸ್ತೆಗೆ ಓವರ್ ಲೋಡ್‌ಗಳಲ್ಲಿ ಕ್ರಷರ್‌ಗಳ ಮಾಲೀಕರು ಎಂ.ಸ್ಟ್ಯಾಂಡ್ ಮತ್ತು ಜಲ್ಲಿ ಸಾಗಿಸುತ್ತಿದ್ದಾರೆ. ಅತಿ ಭಾರವಾದ ವಾಹನಗಳಿಂದ ರಸ್ತೆಗಳು ಹಾಳಾಗಿ ಹೋಗುತ್ತಿವೆ. ದ್ವಿಚಕ್ರ ವಾಹನ, ಟ್ರ್ಯಾಕ್ಟರ್ ಓಡಾಟ ದುರಸ್ತವಾಗಿದೆ. ಅದ್ದರಿಂದ ಕೂಡಲೇ ಬಾರಿ ವಾಹನಗಳ ಸಂಚಾರ ರದ್ದುಪಡಿಸಬೇಕು ಎಂದು ಪ್ರತಿಭಟನಕಾರರು ಆಗ್ರಹಿಸಿದರು.
ರಸ್ತೆ ದುರಸ್ತಿ ಮಾಡುವ ಮೂಲಕ ಸುಗಮ ಸಂಚಾರಕ್ಕೆ ಅನುಕೂಲ ಮಾಡಿಕೊಡಬೇಕು. ಸತ್ತೂರು ಕೆರೆ ಹೊಳೆತ್ತುವ ಕಾಮಗಾರಿಯಲ್ಲಿ ಸಣ್ಣ ನೀರಾವರಿ ಇಲಾಖೆ 2016-17 ನೇ ಸಾಲಿನಲ್ಲಿ ನಡೆದಿರುವ 60 ಲಕ್ಷ ರೂಪಾಯಿಗಳ ಹಗರಣವನ್ನು ಸಮಗ್ರ ತನಿಖೆ ನಡೆಸಿ ತಪ್ಪಿತಸ್ಥರಿಗೆ ಶಿಕ್ಷೆ ವಿಧಿಸಬೇಕು ಎಂದು ಒತ್ತಾಯಿಸಿದರು.
ರಸ್ತೆ ತಡೆ ನಡೆಸಿದ್ದರಿಂದ ಸುಮಾರು 2 ಗಂಟೆಗಳ ಕಾಲ ವಾಹನ ಸವಾರರು ಪರದಾಟ ನಡೆಸಿದರು. ಸಂಘಟನೆಯ ರಾಜ್ಯ ಉಪಧ್ಯಕ್ಷ ಹೊಸಳ್ಳಿ ಮಲ್ಲೇಶ್, ಮುಕಂಡರಾದ ಗುಡಿಹಳ್ಳಿ ಹಾಲೇಶ್, ಕಬ್ಬಳ್ಳಿ ಬಸವರಾಜ್, ಮಹದೇವಪ್ಪ, ಜಯಪ್ರಕಾಶ್, ಹನುಮಂತಪ್ಪ, ಗುರುಲಿಂಗರೆಡ್ಡಿ, ಪೂಜಾರ ಹನುಮಂತ, ಬಸವರಾಜ್, ಮಹೇಶ್, ಗಂಟ್ಲಪ್ಪ, ಅಜ್ಜಿನ ಓಬಪ್ಪ, ಗಂಗಪ್ಪ ಮತ್ತಿತರರು ಉಪಸ್ಥಿತರಿದ್ದರು.